ರಾಜ್ಯ ಕಾಂಗ್ರೆಸ್ ಸರಕಾರವು 135 ಶಾಸಕರ ಬಲದೊಂದಿಗೆ ಸುಭದ್ರವಾಗಿದೆ : ಸಚಿವ ಸಂತೋಷ್ ಲಾಡ್
ʼʼಕೇಂದ್ರ ಬಿಜೆಪಿ ಸರಕಾರ ಐಸಿಯುನಲ್ಲಿದೆʼʼ

ಕೊಪ್ಪಳ: ಬೇರೆ ಪಕ್ಷಗಳೊಂದಿಗೆ ಸೇರಿ ಸಮ್ಮಿಶ್ರ ಸರಕಾರ ರಚನೆ ಮಾಡಿರುವ ಕೇಂದ್ರ ಬಿಜೆಪಿ ಸರಕಾರ ಐಸಿಯುನಲ್ಲಿದೆ. ಆದರೆ, ನಮ್ಮ ರಾಜ್ಯ ಕಾಂಗ್ರೆಸ್ ಸರಕಾರವು 135 ಶಾಸಕರ ಬಲದೊಂದಿಗೆ ಸುಭದ್ರವಾಗಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಆಂದ್ರ ಸಿಎಂ ಚಂದ್ರ ಬಾಬು ನಾಯ್ಡು ಅವರು ಎನಾದರು ಪತಾಕೆ ಹಾರಿಸಿದರೆ ಇವರ ಸರಕಾರ ಹೋದಂತೆ, ಎರಡುವರೆ ವರ್ಷದಿಂದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಅವರು ಕೇಳುತಿದ್ದಾರೆ. ಅದಕ್ಕೆ ನಾವು ಉತ್ತರಿಸುತ್ತಾ ಬಂದಿದ್ದೇವೆ. ಆದರೆ, ಪ್ರಧಾನಿ ಅವರ ಬದಲಾವಣೆ ಬಗ್ಗೆ ಉತ್ತರಿಸುವುದಿಲ್ಲ. ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು ದೇಶದಲ್ಲಿ ಬಡತನ ಜಾಸ್ತಿ ಇದೆ ಎಂದು ಪ್ರಧಾನಿ ವಿರುದ್ಧ ಮಾತನಾಡುತ್ತಾರೆ. ಆರೆಸೆಸ್ಸ್ ಅಧ್ಯಕ್ಷರು ಕೂಡ 75 ವರ್ಷಗಳ ನಂತರ ಪಿಎಂ ಬದಲಾವಣೆ ಆಗಬೇಕು ಎಂದಿದ್ದಾರೆ. ಪ್ರಧಾನಿ ಮೋದಿಯವರಿಗೆ 75ವರ್ಷ ವಯಸ್ಸು ತುಂಬಲಿದೆ ಇದಕ್ಕೆ ಬಿಜೆಪಿಯವರು ಉತ್ತರಿಸುವರೇ ? ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಸುರ್ಜೆವಾಲ ಅವರು ಪದೇ ಪದೇ ಭೇಟಿ ನಿಡುವ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವೊಂದು ಕೈ ಶಾಸಕರು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು. ಪಕ್ಷದೊಳಗಿನ ಸಮಸ್ಯೆ ಸರಿಪಡಿಸುವುದಕ್ಕಾಗಿ ಹಾಗೂ ಶಿಸ್ತು ತರುವುದಕ್ಕಾಗಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು, ಕರ್ನಾಟಕಕ್ಕೆ ಆಗಮಿಸಿ ಶಾಸಕರು ಮತ್ತು ಸಚಿವರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು.
ಮಾಜಿ ಸಂಸದ ಪ್ರತಾಪ ಸಿಂಹ ಅವರು ವಿಶ್ವದ ಆರ್ಥಿಕ ಸಲಹೆಗಾರನೆಂದು ಬಿರುದುಕೊಟ್ಟಿರುವ ವಿಚಾರವಾಗಿ ಮಾತನಾಡಿದ ಅವರು, ನಾನು ವೈಯಕ್ತಿಕವಾಗಿ ಯಾರು ಬಗ್ಗೆ ಮಾತನಾಡಿಲ್ಲ, ಸೈದ್ಧಾಂತಿಕವಾಗಿ ವಿಚಾರಧಾರೆ ವ್ಯಕ್ತಪಡಿಸಿರಬಹುದು. ಅದಕ್ಕೆ ಪ್ರತಾಪ ಸಿಂಹ ಏನಾದರೂ ಅಂದಿದ್ದರೇ ಅವರ ಬಗ್ಗೆ ನಾನು ಏನು ಮಾತನಾಡಲ್ಲ ಎಂದು ಹೇಳಿದರು.
ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ 56 ಲಕ್ಷ ಲೇಬರ್ ಕಾರ್ಡ್ ಗಳಿದ್ದವು. ಇದರಲ್ಲಿ ಪರಿಶೀಲನೆ ನಡೆಸಿ, 20ಲಕ್ಷ ಕಾರ್ಡ್ ರದ್ದು ಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಶೀಲನೆ ನಡೆಸಿ, ನಿಜವಾದ ಕಾರ್ಮಿಕರಿಗೆ ಮಾತ್ರ ಕಾರ್ಮಿಕರ ಕಾರ್ಡ್ ಕೊಡಲಾಗುವುದು. ಕಾರ್ಮಿಕ ಇಲಾಖೆಯಲ್ಲಿ ಅವ್ಯವಹಾರವಾಗಿದ್ದರೆ. ಅದರ ಬಗ್ಗೆ ನಿಖರವಾದ ದೂರು ಕೊಟ್ಟರೆ ಖಂಡಿತ ಪರಿಶೀಲಿಸಿ, ಕ್ರಮ ಜರುಗಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಧರ್ಮಸ್ಥಳದಲ್ಲಿ ಕಾನೂನಾತ್ಮಕವಾಗಿ ಏನಾಗಿದೆ ಎಂಬುದರ ಕುರಿತು ವಿಚಾರ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ನಮ್ಮ ಸರಕಾರ ಯಾರ ಬೆಂಬಲಕ್ಕೂ ಇಲ್ಲ. ಸುಖಾಸುಮ್ಮನೆ ಈ ವಿಚಾರದಲ್ಲಿ ರಾಜ್ಯ ಸರಕಾರವನ್ನು ಎಳೆದು ತರುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಈ ವೇಳೆ ಜಿಲ್ಲಾಧ್ಯಕ್ಷ ಅಮರೇಗೌಡ ಭಯ್ಯಾಪೂರ, ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸದ ಗುಪ್ತಾ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಕಾಂಗ್ರೇಸ್ ವಕ್ತಾರೆ ಶೈಲಜಾ ಹಿರೇಮಠ, ಕಾವೇರಿ, ಮತ್ತು ಅಕ್ಬರ್ ಪಾಷ ಪಲ್ಟನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.







