ಗಂಗಾವತಿಯಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣಾ ಸಮಾರಂಭ

ಗಂಗಾವತಿ: ಅಕ್ಷರ ಕಲಿಯುವ ಮತ್ತು ಕಲಿಸುವ ಕಾರ್ಯವನ್ನು ಇಸ್ಲಾಂ ಪುಣ್ಯದಾಯಕ ಕರ್ಮವೆಂದು ಪರಿಗಣಿಸುತ್ತದೆ. ಸಂಪತ್ತನ್ನು ನಾವು ಕಾಪಾಡಬೇಕಾದರೆ, ಜ್ಞಾನವು ನಮ್ಮನ್ನು ಕಾಪಾಡುತ್ತದೆ ಎಂದು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ (ಬಿಐಇ) ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು.
ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್, ಗಂಗಾವತಿ ಘಟಕದ ವತಿಯಿಂದ ಸ್ಥಳೀಯ ಅಲೀ ಫಾತಿಮಾ ಶಾದಿ ಮಹಲ್‌ನಲ್ಲಿಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಐಓ ಸಿಂಧನೂರು ಘಟಕದ ಸ್ಥಾನೀಯ ಅಧ್ಯಕ್ಷೆ ನೇಹಾ ತಸ್ಲೀಮ್ ಮಾತನಾಡಿ, ಜ್ಞಾನವು ಅಜ್ಞಾನ ಮತ್ತು ಅಂಧಕಾರವನ್ನು ದೂರ ಮಾಡುವ ಬೆಳಕಾಗಿದೆ. ಹೆಚ್ಚು ಕಲಿಯುವವರೇ ದೇವರ ಶ್ರೇಷ್ಠ ದಾಸರಾಗಿರುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯ ಮಕ್ಬೂಲ್ ಎಂ.ಬಿ., ಕೊಪ್ಪಳ ಎಸ್‌ಡಿಎಂ ಅಧ್ಯಕ್ಷ ಮುಹಮ್ಮದ್ ದಳಪತಿ, ಶಿಕ್ಷಕರಾದ ಮುಹಮ್ಮದ್ ಅಲಿ, ಡಾ.ಅಂಜುಮ್ ತಾಜ್ ಹಾಗೂ ಡಾ.ಝೋಬಿಯಾ ಅಫ್ಶೀನ್ ಅವರು ಶಿಕ್ಷಣದ ಮಹತ್ವ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಗಂಗಾವತಿ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕುದ್ದುಸ್ ಪ್ರಾಸ್ತಾವಿಕವಾಗಿ ಬಿಐಇ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಜಿಐಓ ಸ್ಥಾನೀಯ ಅಧ್ಯಕ್ಷೆ ಹುಮೇರಾ ಸಿದ್ದೀಕಾ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಅಬ್ದುಲ್ ಕುದ್ದುಸ್ ವಂದಿಸಿದರು.






