ಗ್ಯಾರಂಟಿ ಯೋಜನೆಗಳಲ್ಲಿ ಲೋಪಗಳಿವೆ; ಪರಿಷ್ಕರಣೆ ಅಗತ್ಯ: ಶಾಸಕ ಬಸವರಾಜ್ ರಾಯರೆಡ್ಡಿ

ಯಲಬುರ್ಗಾ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕೆಲವು ಆಡಳಿತಾತ್ಮಕ ಹಾಗೂ ತಾಂತ್ರಿಕ ಲೋಪಗಳಿರುವುದನ್ನು ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಒಪ್ಪಿಕೊಂಡಿದ್ದಾರೆ.
ಗುರುವಾರ ಯಲಬುರ್ಗಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರ ಅಂದಮೇಲೆ ಕೆಲವು ನ್ಯೂನತೆಗಳು ಇರುವುದು ಸಹಜ. ಅವುಗಳನ್ನು ಸರಿಪಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ” ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದಲ್ಲಿ 1.26 ಕೋಟಿ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಹಣ ಪಾವತಿಸಬೇಕಿದ್ದು, ದಾಖಲೆಗಳಲ್ಲಿನ ದೋಷಗಳು ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಪ್ರಸ್ತುತ 1.24 ಕೋಟಿ ಮಹಿಳೆಯರಿಗೆ ಮಾತ್ರ ಹಣ ತಲುಪುತ್ತಿದೆ. ಸುಮಾರು 2 ಲಕ್ಷ ಅರ್ಹ ಫಲಾನುಭವಿಗಳಿಗೆ ಇನ್ನೂ ಹಣ ಜಮೆಯಾಗಿಲ್ಲ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ ಸುಮಾರು 1.68 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯ ದೊರೆಯುತ್ತಿದ್ದು, ಕೆಲವು ಅನರ್ಹರು ಹಾಗೂ ಸರ್ಕಾರಿ ನೌಕರರ ಮನೆಗಳಿಗೂ ಯೋಜನೆಯ ಲಾಭ ದೊರೆಯುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪರಿಷ್ಕರಣೆ ಅಗತ್ಯವಾಗಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಮುಂದುವರಿಕೆಗೆ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಈ ಯೋಜನೆಗಳಿಗೆ ಸರ್ಕಾರ ವರ್ಷಕ್ಕೆ ಸುಮಾರು 52 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದರು.
“ಯಾರೇ ಮುಖ್ಯಮಂತ್ರಿ ಆದರೂ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ. ಇದು ಯಾವುದೇ ವ್ಯಕ್ತಿಯ ವೈಯಕ್ತಿಕ ಕಾರ್ಯಕ್ರಮವಲ್ಲ, ಕಾಂಗ್ರೆಸ್ ಪಕ್ಷದ ಬದ್ಧತೆಯ ಕಾರ್ಯಕ್ರಮವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಈ ಯೋಜನೆಗಳನ್ನು ಮುಂದುವರಿಸುವ ಬದ್ಧತೆ ಇದೆ” ಎಂದು ಹೇಳಿದರು.
ಪ್ರತಿ ತಿಂಗಳು ಸುಮಾರು 2,500 ಕೋಟಿ ರೂ. ಹಣವನ್ನು ಭ್ರಷ್ಟಾಚಾರ ರಹಿತವಾಗಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಆದರೆ ಕೆಲವು ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಹಾಗೂ ಅನರ್ಹರು ಯೋಜನೆಗಳ ಲಾಭ ಪಡೆಯುತ್ತಿರುವುದು ಪರಿಷ್ಕರಣೆ ವೇಳೆ ಪತ್ತೆಯಾಗಿದ್ದು, ಅವುಗಳನ್ನು ಸರಿಪಡಿಸುವ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದರು.






