ರಾಜ್ಯೋತ್ಸವ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಇಬ್ಬರು ಜಾನಪದ ಕಲಾವಿದರು ಆಯ್ಕೆ

ಶಿವಲಿಂಗಪ್ಪ, ದಾವಲಸಾಬ ಅತ್ತಾರ
ಕೊಪ್ಪಳ : ರಾಜ್ಯ ಸರ್ಕಾರ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಯ ಇಬ್ಬರು ಜಾನಪದ ಕಲಾವಿದರು ಸ್ಥಾನ ಪಡೆದಿದ್ದಾರೆ.
ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ಹಿರಿಯ ಜಾನಪದ ಕಲಾವಿದ ದಾವಲಸಾಬ ಅತ್ತಾರ ಹಾಗೂ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಶಿವಲಿಂಗಪ್ಪ ರಾಮಣ್ಣ ಅವರಿಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.
ಗೀಗೀ ಪದದ ಮೂಲಕ ಜನಪದ ಪರಂಪರೆ ಉಳಿಸಿದ ದಾವಲಸಾಬ ಅತ್ತಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ :
ಕೊಪ್ಪಳ: ಉತ್ತರ ಕರ್ನಾಟಕದ ಜನಪದ ಕಲೆಯ ವಿಶಿಷ್ಟ ಪ್ರಕಾರವಾದ ಗೀಗೀ ಪದ ಗಾಯನದ ಮೂಲಕ ನಾಲ್ಕು ದಶಕಗಳಿಂದ ಜನಮನ ಗೆದ್ದಿರುವ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ಹಿರಿಯ ಜಾನಪದ ಕಲಾವಿದ ದಾವಲಸಾಬ ಅತ್ತಾರ ಅವರು ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಡು ಬಡತನದ ನಡುವೆಯೂ ಜನಪದ ಕಲೆಯ ಮೇಲಿನ ಅಪಾರ ಪ್ರೀತಿ ಮತ್ತು ನಿಷ್ಠೆಯಿಂದ ಕಲಾಸೇವೆ ಮಾಡುತ್ತ ಬಂದಿರುವ ದಾವಲಸಾಬ ಅತ್ತಾರ ಅವರು ವೃತ್ತಿಯಿಂದ ಅಗರಬತ್ತಿ ಮಾರಾಟ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಆದರೆ ಜನಪದ ಕಲೆಯೇ ಅವರ ಬದುಕಿನ ಉಸಿರು. ಈಗಾಗಲೇ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದಿರುವ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತೊಂದು ಮಹತ್ವದ ಗೌರವವಾಗಿದೆ.
ಜಾನಪದ ಕಲೆಯ ಪರಂಪರೆ ಇವರಿಗೆ ಮನೆತನದಿಂದಲೇ ಬಂದ ಬಳುವಳಿ. ತಂದೆ ಮೋಹರಂ ಹಾಡುಗಳಲ್ಲಿ ಪ್ರಸಿದ್ಧಿ ಪಡೆದಿದ್ದರೆ, ಅಜ್ಜ ಬಯಲಾಟ ಕಲಾವಿದರಾಗಿದ್ದರು. ಈ ಕಲಾ ಪರಂಪರೆಯನ್ನು ಮುಂದುವರಿಸಿದ ದಾವಲಸಾಬ ಅವರು ಗೀಗೀ ಪದ ಗಾಯನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
16ರಿಂದ 18ನೇ ವಯಸ್ಸಿನಲ್ಲಿಯೇ ಗಾಯನ ಆರಂಭಿಸಿದ ಅವರು, ಸುಮಾರು 35ರಿಂದ 40 ವರ್ಷಗಳಿಂದ ಗೀಗೀ ಪದಗಳ ಮೂಲಕ ಜನರಲ್ಲಿ ನೈತಿಕ ಮೌಲ್ಯ, ತತ್ವ, ಸಾಮಾಜಿಕ ಜಾಗೃತಿ ಹಾಗೂ ಐತಿಹಾಸಿಕ ಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ. ತಮ್ಮ 20ನೇ ವಯಸ್ಸಿನಲ್ಲಿ ಇಟಗಿ ಭೀಮಾಂಬಿಕಾ ಜಾತ್ರೆಯಲ್ಲಿ ಮೊದಲ ಕಾರ್ಯಕ್ರಮ ನೀಡಿದ ಅವರು, ನಂತರ ಸುತ್ತಮುತ್ತಲಿನ ಗ್ರಾಮಗಳ ಜಾತ್ರೆ, ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನಪ್ರಿಯತೆ ಗಳಿಸಿದರು.
ಗೀಗೀ ಪದ ಗಾಯನವು ವಿಶಿಷ್ಟವಾದ ಸಾಮೂಹಿಕ ಕಲಾಪ್ರಕಾರವಾಗಿದೆ. ಒಬ್ಬರು ಡಪ್ಪು ಬಾರಿಸುತ್ತ ಹಾಡಿದರೆ, ಇನ್ನಿಬ್ಬರು ಶ್ರುತಿ ಮತ್ತು ಕಾಳ ಹಿಡಿದು ‘ಗೀಗೀ ಅರೆ ಹಾ ಜೀ ಜೀ’ ಎಂಬ ಹಿಮ್ಮೇಳದೊಂದಿಗೆ ಗಾಯನಕ್ಕೆ ಸಾಥ್ ನೀಡುತ್ತಾರೆ. ಹೀಗೆ ಮೂವರು ಕಲಾವಿದರ ತಂಡದ ಮೂಲಕ ಪ್ರಸ್ತುತಗೊಳ್ಳುವ ಈ ಕಲೆಯಲ್ಲಿ ನೀತಿ, ತತ್ವ, ಸಾಮಾಜಿಕ ಹಾಗೂ ಐತಿಹಾಸಿಕ ವಿಷಯಗಳಿಗೆ ಹೆಚ್ಚಿನ ಪ್ರಾಧಾನ್ಯವಿದೆ. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಸ್ವಾತಂತ್ರ್ಯ ಹೋರಾಟದ ನಾಯಕರು ಹಾಗೂ ಹೋರಾಟಗಾರರ ಕುರಿತ ಹಾಡುಗಳನ್ನೂ ಅವರು ಜನರಿಗೆ ತಲುಪಿಸಿದ್ದಾರೆ.
ಹಾಬಲಕಟ್ಟಿ, ಬಾದಿಯನಾಳ, ಯರಗೇರಿ, ಗರೇಬಾಳ, ರಾಂಪುರ, ಹನುಮಸಾಗರ, ದುಗ್ಗಲದೋಣಿ, ನಿಲೋಗಲ್, ಮಾರಿಕಲ್ಲ, ಮಾಲಗಿತ್ತಿ ಹಾಗೂ ಹೊಸಳ್ಳಿ ಸೇರಿದಂತೆ ಹಲವು ಗ್ರಾಮಗಳ ಜಾತ್ರೆ ಮತ್ತು ಉತ್ಸವಗಳಲ್ಲಿ ತಮ್ಮ ಗಾಯನದ ಮೂಲಕ ಜನರನ್ನು ರಂಜಿಸಿದ್ದಾರೆ. ಧಾರವಾಡ ಮತ್ತು ಬೆಂಗಳೂರಿನಲ್ಲಿಯೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾದ ಸರ್ಕಾರಿ ಉತ್ಸವಗಳಲ್ಲಿ ಭಾಗವಹಿಸಿ ಮೆಚ್ಚುಗೆ ಹಾಗೂ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ತಮ್ಮದೇ ಆದ ಗೀಗೀ ಪದ ತಂಡವನ್ನು ಕಟ್ಟಿಕೊಂಡು ಜಾತ್ರೆ, ಉರುಸು ಮತ್ತು ಉತ್ಸವಗಳಲ್ಲಿ ಬೆಳಗಿನ ಜಾವದವರೆಗೂ ಗಾಯನ ನಡೆಸಿ ಜನರ ಮನಸ್ಸಿನಲ್ಲಿ ಅಚ್ಚಳಿಯದ ನೆನಪು ಮೂಡಿಸಿದ್ದಾರೆ.
ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನ, ಗೌರವ ಹಾಗೂ ಪ್ರಶಂಸಾ ಪತ್ರಗಳನ್ನು ಪಡೆದಿರುವ ದಾವಲಸಾಬ ಅವರು ಜನಪದ ಕಲೆಯ ಮೂಲ ಸೊಗಡು ಕಳೆದುಹೋಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಗಾಗಿ ಗೀಗೀ ಪದಗಳ ಸಾಹಿತ್ಯವನ್ನು ಬದಲಿಸಿ, ಹಾಸ್ಯಕ್ಕೆ ಹೆಚ್ಚು ಒತ್ತು ನೀಡುವ ಪ್ರವೃತ್ತಿ ಹೆಚ್ಚುತ್ತಿರುವುದು ಅವರಿಗೆ ನೋವುಂಟು ಮಾಡಿದೆ. ಗೀಗೀ ಪದ ಮತ್ತು ಲಾವಣಿ ಪದಗಳು ಉತ್ತರ ಕರ್ನಾಟಕದ ಜನಪದ ಪರಂಪರೆಯ ಅಮೂಲ್ಯ ಸಂಪತ್ತಾಗಿದ್ದು, ಅವುಗಳ ಮೂಲ ಸಾಹಿತ್ಯ, ಸತ್ವ ಮತ್ತು ಸೊಗಡನ್ನು ಉಳಿಸಬೇಕೆಂಬುದು ಅವರ ಆಶಯವಾಗಿದೆ.
ಮಹಿಬೂಬಸಾಬ ಮತ್ತು ಮಹಿಬೂಬಿ ದಂಪತಿಗಳ ಪುತ್ರರಾದ ದಾವಲಸಾಬ ಅವರು ಮುಸ್ಲಿಂ ಕುಟುಂಬದಲ್ಲಿ ಜನಿಸಿದರೂ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿ ಬದುಕುತ್ತಿರುವ ಕಲಾವಿದರಾಗಿದ್ದಾರೆ. ಭಜನೆ, ಗೀಗೀ ಪದ ಹಾಗೂ ಲಾವಣಿ ಗಾಯನದಲ್ಲಿಯೂ ಆಸಕ್ತಿ ಹೊಂದಿರುವ ಅವರು ಜನಪದ ಕಲೆಗಳ ಮೂಲಕ ಸಾಮಾಜಿಕ ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ.
ಸುಮಾರು ನಾಲ್ಕು ದಶಕಗಳ ಸುದೀರ್ಘ ಕಲಾಸೇವೆ, ಜನಪದ ಸಾಹಿತ್ಯದ ಮೇಲಿನ ಅಭಿಮಾನ, ಆರ್ಥಿಕ ಸಂಕಷ್ಟಗಳ ನಡುವೆಯೂ ಕಲೆಯನ್ನು ಕೈಬಿಡದ ಛಲ ಹಾಗೂ ಗ್ರಾಮೀಣ ಜನಪದ ಪರಂಪರೆಯ ಸಂರಕ್ಷಣೆಗೆ ನೀಡಿದ ಕೊಡುಗೆಯನ್ನು ಗುರುತಿಸಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಕುಷ್ಟಗಿ ತಾಲೂಕು ಹಾಗೂ ಹಾಬಲಕಟ್ಟಿ ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಸರಳ ಬದುಕು, ಶ್ರೀಮಂತ ಕಲಾಸಂಪತ್ತು ಹೊಂದಿರುವ ದಾವಲಸಾಬ ಅತ್ತಾರ ಅವರ ಸಾಧನೆ ಗ್ರಾಮೀಣ ಪ್ರತಿಭೆಗಳಿಗೆ ಪ್ರೇರಣೆಯಾಗಿದೆ.






