ಮಹಿಳೆಯರು ಕುಟುಂಬ ಸಂರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ: ತನುಶ್ರೀ ಟಿಜೆ

ಕನಕಗಿರಿ: ಸ್ತ್ರೀ ಶಕ್ತಿಯನ್ನು ಗೌರವಿಸಲು, ಅವಳ ಸಾಧನೆಗಳನ್ನು ಸ್ಮರಿಸಲು ಮತ್ತು ಸಮಾಜದಲ್ಲಿ ಲಿಂಗ ಸಮಾನತೆಯನ್ನು ಸಾರಲು ಪ್ರತಿ ವರ್ಷ ಮಾರ್ಚ್ 8 ರಂದು 'ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ'ಯನ್ನು ಆಚರಿಸಲಾಗುತ್ತದೆ ಎಂದು ಪ.ಪಂ ಅಧ್ಯಕ್ಷೆ ತನುಶ್ರೀ ಟಿಜೆ ರಾಮಚಂದ್ರ ಹೇಳಿದರು.
ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿರು.
ಇಂದಿನ ಕಾಲದಲ್ಲಿ ಮಹಿಳೆಯರು ಕೇವಲ ಕುಟುಂಬ ಸಂರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ. ಬಾಹ್ಯಾಕಾಶ ಸಂಶೋಧನೆಯಿಂದ ಹಿಡಿದು, ದೇಶದ ರಕ್ಷಣೆ, ರಾಜಕೀಯ, ಕ್ರೀಡೆ ಮತ್ತು ತಂತ್ರಜ್ಞಾನದವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ, ಸಾಲು ಮರದ ತಿಮ್ಮಕ್ಕ, ಸುಧಾ ಮೂರ್ತಿ ಅಂತಹ ಸಾಧಕಿಯರು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.
ಪ್ರಾಂಶುಪಾಲ ಡಾ. ಬಜರಂಗಬಲಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು 'ಅಬಲೆ'ಯಲ್ಲ 'ಸಬಲೆ' ಎಂದು ಸಾಬೀತುಪಡಿಸಿದ್ದಾರೆ. ಮಹಿಳಾ ದಿನಾಚರಣೆಯ ನಿಜವಾದ ಉದ್ದೇಶ 'ಮಹಿಳಾ ಸಬಲೀಕರಣ'. ಸಬಲೀಕರಣ ಎಂದರೆ ಕೇವಲ ಸೌಲಭ್ಯಗಳನ್ನು ನೀಡುವುದಲ್ಲ, ಬದಲಾಗಿ ಅವಳು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ನೀಡುವುದು. ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬವೇ ಶಿಕ್ಷಣ ಪಡೆದಂತೆ. ಅವಳಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಭದ್ರತೆ ನೀಡಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ತಯಾರಿಸಲಾದ ಪ್ರಾಯೋಗಿಕ ಪತ್ರಿಕೆಯನ್ನು ಅತಿಥಿಗಳು, ನೆರೆದಿದ್ದ ಗಣ್ಯರು ಹಾಗೂ ವಿಭಾಗದ ಉಪನ್ಯಾಸಕರಾದ ವಿಜಯ್ ಸರೋದೆ ಅವರು ಬಿಡುಗಡೆ ಮಾಡಿದರು.
ಕೊಪ್ಪಳ ವಿಶ್ವವಿದ್ಯಾಲಯ ಮಟ್ಟದಲ್ಲಿ ಇತ್ತೀಚಿಗೆ ನಡೆದ ಕೋ-ಕೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದ ಕಾಲೇಜಿನ ಮಹಿಳಾ ತಂಡಕ್ಕೆ ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆ ನಿಮಿತ್ತ ವಿದ್ಯಾರ್ಥಿನಿಯರಿಗೆ ರಂಗೋಲಿ ಸ್ಪರ್ಧೆ, ಸಂಗೀತ ಸ್ಪರ್ಧೆ, ಕಿರುನಾಟಕ, ನೃತ್ಯ ಹಾಗೂ ವೇಷಭೂಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾಲೇಜಿನಲ್ಲಿ
ಈ ವೇಳೆ ಪ್ರಾಧ್ಯಾಪಕರಾದ ನಫೀಸಾ ಬಾನು, ರಕ್ಷಿತ್.ಎ, ವೀರೇಶ್ ಕೆಂಗಲ್, ಸರ್ವಮಂಗಳಮ್ಮ.ಟಿ.ಆರ್, ಉಪನ್ಯಾಸಕ ಅಮರೇಶ್ ವೆಂಕಟಾಪುರ, ಹುಲಿಗೆಮ್ಮ, ಫರ್ಹಾನ್ತಾಜ್, ದತ್ತಾಂಶ ನಮೂದಕಿ ಜ್ಯೂತಿ.ಸಿ ಇತರರು ಉಪಸ್ಥಿತರಿದ್ದರು.






