ಯಲಬುರ್ಗಾ | ಲಡಾಯಿ ಕಟ್ಟೆ ಸ್ಮಾರಕವಾಗಿ ಜೀವಂತವಾಗಿರಲಿ : ಪಿ.ಜಿ.ಆರ್.ಸಿಂಧ್ಯಾ

ಯಲಬುರ್ಗಾ, ಸೆ.17: ಚರಿತ್ರೆಯನ್ನು ಅರಿಯದವರು ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಹಾಗೂ ಹೈದರಾಬಾದ್ ಕರ್ನಾಟಕ ವಿಮೋಚನೆ ಹೋರಾಟಕ್ಕಾಗಿ ಪ್ರಾಣ ಬಲಿದಾನ ಮಾಡಿದ ಮಹನೀಯರು ಸದಾ ಸ್ಮರಣೀಯರಾಗಿರಬೇಕು. ಅದಕ್ಕಾಗಿ ಲಡಾಯಿ ಸ್ಮಾರಕವನ್ನು ನಿರ್ಮಿಸಿ ಅದನ್ನು ಜೀವಂತವಾಗಿರಿಸುವ ಅಗತ್ಯವಿದೆ ಎಂದು ಮಾಜಿ ಗೃಹ ಸಚಿವರು ಹಾಗೂ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ಕರಮುಡಿ ಗ್ರಾಮದ ನಿಂಗೋಜಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ನಡೆದ 78ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ಅವರು ಮಾತನಾಡಿದರು.
ಹೋರಾಟಗಾರರ ತ್ಯಾಗ ಸ್ಮರಣೀಯ :
ಮುಂಬೈ ಹಾಗೂ ಹೈದರಾಬಾದ್ ಕರ್ನಾಟಕದ ಮಧ್ಯಭಾಗದಲ್ಲಿ ನಡೆದ ಹೋರಾಟದಲ್ಲಿ ಹಲವರು ಹುತಾತ್ಮರಾಗಿದ್ದಾರೆ. ಅವರ ಸ್ಮರಣಾರ್ಥ ಲಡಾಯಿ ಕಟ್ಟೆ ಸ್ಮಾರಕ ಮಾಡುವುದು ಅವಶ್ಯಕ ಎಂದರು.
ಅಳವಂಡಿ ಶಿವಮೂರ್ತಿಸ್ವಾಮಿ, ರಾಮಚಂದ್ರ ವೀರಪ್ಪ, ಕೋಳೂರು ಮಲ್ಲಪ್ಪ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಹೋರಾಟಗಾರರ ಕೊಡುಗೆಯನ್ನು ಅವರು ಸ್ಮರಿಸಿದರು.
ರಜಾಕಾರರ ತಪ್ಪುಗಳನ್ನು ಸಂಪೂರ್ಣ ಮುಸ್ಲಿಂ ಸಮಾಜಕ್ಕೆ ತಳಕು ಹಾಕುವುದು ಅಕ್ಷಮ್ಯ ಅಪರಾಧ. ಹೈದರಾಬಾದ್ ಕರ್ನಾಟಕದ ಏಳು ಜಿಲ್ಲೆಗಳು ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬಲಿಷ್ಠವಾಗಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ ಸುಮಾರು 8 ಲಕ್ಷ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ತೊಡಗಿಸಿಕೊಂಡಿದ್ದು, “ಇಂತಹ ಸಂಸ್ಥೆಗೆ ಮುಖ್ಯ ಆಯುಕ್ತನಾಗಿರುವುದು ನನ್ನ ಭಾಗ್ಯ” ಎಂದು ಹೇಳಿದರು.
ಗ್ರಾ.ಪಂ.ಅಧ್ಯಕ್ಷ ಲಿಂಗರಾಜ ಉಳ್ಳಾಗಡ್ದಿ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ ಹಾಗೂ ಗೈಡ್ಸದ ರಾಜ್ಯಸಂಘಟನಾ ಆಯುಕ್ತರಾದ ಸಿ.ಮಂಜುಳಾ, ಕಲ್ಯಾಣ ಕರ್ನಾಟಕದ ಉಸ್ತುವಾರಿಗಳಾದ ಮಲ್ಲೆಶ್ವರಿ,ಮಲ್ಲಿಕಾರ್ಜುನ ಚೌಕಿಮಠ, ನಿಂಗೋಜಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶಶಿಕಾಂತ ನಿಂಗೋಜಿ,ಬಿ.ಎಸ್.ವೀರಾಪುರ,ರಾಮಣ್ಣ ಪ್ರಭಣ್ಣವರ, ಕೆ.ಎಸ್.ಕುರಿ,ಸ.ಶರಣಪ್ಪ ಪಾಟೀಲ,ಬಸವವಾಜ ಕಿಳ್ಳಿಕ್ಯಾತರ,ಶಿವಪುತ್ರಪ್ಪ ಮಲಿಗೋಡದ, ನಿಖಿಲ್ ಗೊಂಗಡಶೆಟ್ಟಿ, ಎಸ್.ವಿ.ಪೋ.ಪಾಟೀಲ,ಗೌಡಪ್ಪ ಬಲಕುಂದಿ,ರಾಮಣ್ಣ ಮಾನಶೆಟ್ಟಿ,ಗಂಗಪ್ಪ ಹವಳಿ,ಪರಸಪ್ಪ ಲಮಾಣಿ, ರಾಮಣ್ಣ ಹೊಕ್ಕಳದ,ಬಸವರಾಜ ಕುಕನೂರ,ಬಸಪ್ಪ ಗೌಡಪ್ಪನವರ, ಡಾ.ಪ್ರಕಾಶ, ಡಾ.ರವಿ ನಿಂಗೋಜಿ, ವೀರೇಶ್ ಪತ್ತಾರ, ವೀರೇಶ್ ಹೊನ್ನೂರ, ಷಣ್ಮುಖಪ್ಪ ಕೋರಿ ಉಪಸ್ಥಿತರಿದ್ದರು.
ಶ್ವೇತಾ ನವಲಗುಂದ ನಿರೂಪಿಸಿದರು, ನಜಮಾ ಬೇಗಂ ಸ್ವಾಗತಿಸಿದರು. ಪ್ರೊ.ಡಾ.ವೀರಣ್ಣ ಎ.ನಿಂಗೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ವಂದಿಸಿದರು.
ಸ್ಥಳೀಯ ಶಾಸಕ ಬಸವರಾಜ ರಾಯರೆಡ್ಡಿಯವರು ರಾಜ್ಯದ ಇತಿಹಾಸ ತಿಳಿದವರು, ಸಂಘಟನಾ ಚತುರರು, ಚಾಣಾಕ್ಷರು. ಪ್ರಸ್ತುತ ಸಂದರ್ಭಕ್ಕೆ ಅವರು ಮುಖ್ಯಮಂತ್ರಿ ಆಗಲು ಅರ್ಹರು ಎಂದು ಪಿ.ಜಿ.ಆರ್. ಸಿಂಧ್ಯಾ ಹೇಳಿದರು. ನಾವು ಇಬ್ಬರೂ ಒಟ್ಟಿಗೇ ರಾಜಕೀಯಕ್ಕೆ ಬಂದವರು. ಅವರು ನನ್ನ ಗೆಳೆಯರು ಎಂಬ ಕಾರಣಕ್ಕಲ್ಲ, ಆದರೆ ಅವರಲ್ಲಿ ರಾಜ್ಯ ಮುನ್ನಡೆಸುವ ಸಾಮರ್ಥ್ಯವಿದೆ ಎಂಬ ನಂಬಿಕೆ ಇದೆ ಎಂದರು.







