ಯಲಬುರ್ಗಾ: ಚೌತಿ ಹಬ್ಬ ಹಿನ್ನೆಲೆಯಲ್ಲಿ ಶಾಂತಿ ಪಾಲನಾ ಸಭೆ
ಅಹಿತಕರ ಘಟನೆಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಪಿಐ ಪಾಟೀಲ

ಯಲಬುರ್ಗಾ: ಚೌತಿ ಹಬ್ಬ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಪಾಲನಾ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸಿಪಿಐ ಪಾಟೀಲ , ಹಬ್ಬವನ್ನು ಎಲ್ಲ ಸಮುದಾಯದವರು ಸೌಹಾರ್ದ ಹಾಗೂ ಶಾಂತಿಯುತವಾಗಿ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿಧಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮೆರವಣಿಗೆಯ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳು, ವದಂತಿಗಳು ಅಥವಾ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಹ ಪೋಸ್ಟ್ಗಳನ್ನು ಹಂಚಿಕೊಳ್ಳಬಾರದು. ಇಂತಹ ಕೃತ್ಯಗಳಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ವೀರಣ್ಣ ಹುಬ್ಬಳ್ಳಿ ಮಾತನಾಡಿ, ಯಲಬುರ್ಗಾ ಪಟ್ಟಣ ಒಂದು ಸೌಹಾರ್ದ ಕೇಂದ್ರವಾಗಿದೆ. ಪಟ್ಟಣದ ಪ್ರತಿಯೊಂದು ಹಬ್ಬಗಳನ್ನು ಎಲ್ಲಾ ಜನಾಂಗದವರು ಸೇರಿ ಆಚರಿಸಲಾಗುತ್ತದೆ ಹಾಗಾಗಿ ಗಣೇಶೋತ್ಸವನ್ನು ಕೂಡ ಶಾಂತಿಯುಯವಾಗಿ ಆಚರಿಸಲಾಗುವುದು ಎಂದರು.
ಸಭೆಯಲ್ಲಿ ಪಟ್ಟಣ ಪಂಚಾಯತ್ ಅಧಿಕಾರಿಗಳಾದ ನಾಗೇಶ ಎಂ., ಅಗ್ನಿಶಾಮಕ ಅಧಿಕಾರಿ ಎನ್.ಕೆ.ಚಕ್ರಸಾಲಿ, ಪೊಲೀಸ್ ಅಧಿಕಾರಿಗಳು, ಜೆಸ್ಕಾಂ ಇಲಾಖೆಯ ಅಮರೇಶ ರಡ್ಡಿ, ಮಹೇಶ ಹುಬ್ಬಳ್ಳಿ, ಮುಖಂಡರಾದ ಅಮರೇಶ ಹುಬ್ಬಳ್ಳಿ, ಬಾಬುಸಾಬ ಕುಂದಗೋಳ, ಬಾಬುಸಾಬ ಮಂಡಲಗಿರಿ, ಸುರೇಶ ಗೌಡ ಶೀವನಗೌಡ ಮಾಲಿ ಪಾಟೀಲ್, ಮಂಜುನಾಥ ಅಧಿಕಾರಿ, ಸಿದ್ದಪ್ಪ ಕಟ್ಟಿಮನಿ, ಅಶೋಕ ಅರಿಕೇರಿ, ಕಲ್ಲಪ್ಪ ಕರಮುಡಿ ಮತ್ತು ವಿವಿಧ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






