Yelburga | ವಿದ್ಯುತ್ ಟವರ್ ಕಾಮಗಾರಿಯ ವಾಹನಕ್ಕೆ ತಂತಿ ಸಿಲುಕಿ ಐದಾರು ಕಂಬಗಳು ನೆಲಕ್ಕೆ; ಪರಿಹಾರಕ್ಕೆ ಗ್ರಾಮಸ್ಥರ ಪಟ್ಟು!

ಯಲಬುರ್ಗಾ: ವಿದ್ಯುತ್ ಟವರ್ ಕಾಮಗಾರಿಗೆ ಸಂಬಂಧಿಸಿದ ಕಂಪನಿಯ ಬೃಹತ್ ವಾಹನಕ್ಕೆ ವಿದ್ಯುತ್ ತಂತಿಗಳು ಸಿಲುಕಿಕೊಂಡ ಪರಿಣಾಮ ಐದಾರು ವಿದ್ಯುತ್ ಕಂಬಗಳು ಮುರಿದುಬಿದ್ದ ಘಟನೆ ತಾಲ್ಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಬುಧವಾರ ಮುಂಜಾನೆ ಸುಮಾರು 4 ಗಂಟೆಗೆ ನಡೆದಿದೆ.
ವಾಹನದಲ್ಲಿ ಹೈಡ್ರಾಲಿಕ್ ಜಾಕ್ ಉಪಕರಣಗಳನ್ನು ಸಾಗಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.
ಆದರೆ, ಹಲವು ಮನೆಗಳ ಟಿವಿ, ಫ್ರಿಜ್, ವಿದ್ಯುತ್ ಮೀಟರ್ ಹಾಗೂ ರೈತರ ಪಂಪ್‌ಸೆಟ್‌ಗಳು, ಟಿಸಿ ಸೇರಿದಂತೆ ವಿವಿಧ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಕುಡಿಯುವ ನೀರಿನ ಪೂರೈಕೆಯೂ ಸ್ಥಗಿತಗೊಂಡಿದೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಕಂಪನಿಯ ಎರಡು ವಾಹನಗಳನ್ನು ತಡೆದು ರಸ್ತೆ ತಡೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ ಯಲಬುರ್ಗಾ ಪೊಲೀಸರು ಗ್ರಾಮಸ್ಥರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ, ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಾನಿಯನ್ನು ಪರಿಶೀಲಿಸಿ ಪರಿಹಾರದ ಭರವಸೆ ನೀಡುವವರೆಗೆ ವಾಹನಗಳನ್ನು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಹಾನಿಗೊಳಗಾದ ಮನೆಗಳು ಹಾಗೂ ರೈತರ ಉಪಕರಣಗಳಿಗೆ ಕಂಪನಿಯೇ ಪರಿಹಾರ ನೀಡಬೇಕು. ಅಲ್ಲದೆ, ಕಡಿತಗೊಂಡಿರುವ ವಿದ್ಯುತ್ ಸಂಪರ್ಕವನ್ನು ತಕ್ಷಣ ಪುನಃಸ್ಥಾಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.






