ರಸಾಯನಶಾಸ್ತ್ರದ ವಿಶ್ವ ದುಂಡು ಮೇಜಿನ ಸಭೆಗೆ ಗಂಗಾವತಿಯ ಯುವ ವಿಜ್ಞಾನಿ ನಸೀಮ್ ಕೌಸರ್ ಆಯ್ಕೆ

ನಸೀಮ್ ಕೌಸರ್
ಕೊಪ್ಪಳ: ಜರ್ಮನಿಯಲ್ಲಿ ನಡೆಯಲಿರುವ ರಸಾಯನಶಾಸ್ತ್ರದ ವಿಶ್ವ ದುಂಡು ಮೇಜಿನ ಸಭೆಗೆ ಗಂಗಾವತಿಯ ಯುವ ವಿಜ್ಞಾನಿ ನಸೀಮ್ ಕೌಸರ್ ಆಯ್ಕೆಯಾಗಿದ್ದಾರೆ.
ಜೂನ್ 29 ರಂದು ಆರಂಭವಾಗಿರುವ ಈ ಸಭೆಯು ಜುಲೈ 4ರವರೆಗೆ ನಡೆಯಲಿದೆ. ನೊಬೆಲ್ ಪ್ರಶಸ್ತಿ ಪಡೆದ ರಸಾಯನಶಾಸ್ತ್ರದ ದಿಗ್ಗಜ ವಿಜ್ಞಾನಿಗಳ ದುಂಡು ಮೇಜಿನ ಪರಿಷತ್ತಿನ ಸಭೆ ಇದಾಗಿದೆ. ಈ ಸಭೆಗೆ ಭಾರತದಿಂದ ಒಟ್ಟು 29 ಮಂದಿ ತೆರಳಿದ್ದು ಇವರಲ್ಲಿ ವಿಜ್ಞಾನಿ ನಸೀಮ್ ಕೌಸರ್ ಕೂಡ ಒಬ್ಬರಾಗಿದ್ದಾರೆ.
ನಸೀಮ್ ಕೌಸರ್ ಅವರು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಸಹಾಯಕ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜರ್ಮನಿಯ ಲಿಂಡೌನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನಡೆಯುವ ಲಿಂಡೌ ಜಾಗತಿಕ ಸಭೆಯಲ್ಲಿ ವಿಶ್ವದ ಆಯ್ದ 600 ಯುವ ವಿಜ್ಞಾನಿಗಳನ್ನು ಆಹ್ವಾನಿಸಿ ನೊಬೆಲ್ ಪ್ರಶಸ್ತಿ ಪುರಸ್ಕೃತ ದಿಗ್ಗಜರೊಂದಿಗೆ ದುಂಡು ಮೇಜಿನ ಪರಿಷತ್ ನಡೆಸಲಾಗುತ್ತದೆ.
ಪ್ರಸ್ತುತ 74ನೇ ಸಮ್ಮೇಳನವನ್ನು ರಸಾಯನಶಾಸ್ತ್ರ ವಿಷಯಕ್ಕೆ ಮೀಸಲಿಡಲಾಗಿದ್ದು, ಆಯ್ಕೆಗೊಂಡವರ ಪ್ರವಾಸ, ಮತ್ತು ಇನ್ನಿತರ ಖರ್ಚುಗಳನ್ನು ಕೇಂದ್ರದ ವಿಜ್ಞಾನ ಇಲಾಖೆ (ಡಿಎಸ್ಟಿ) ನಿಭಾಯಿಸಲಿದೆ ಎಂದು ತಿಳಿದು ಬಂದಿದೆ.
ನಸೀಮ್ ಕೌಸರ್ ಅವರ ತಂದೆ ಎಂ.ಬಿ ಕೊಪ್ಪಳ ಅವರು ಗಂಗಾವತಿ ನಗರದ ಉರ್ದು ಹಿರಿಯ ಹೈಸ್ಕೂಲ್ನ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.