ಕಕ್ಕಿಹಳ್ಳಿಯಲ್ಲಿ ಜೂ.21ರಂದು ಸಾಂವಿಧಾನಿಕ ಮೌಲ್ಯಗಳು, ಭ್ರಾತೃತ್ವ ಕುರಿತು ಯುವಜನ ಶಿಬಿರ

ಕುಕನೂರ : ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಭಾರತದ ಸಂವಿಧಾನದ ಆಶಯಗಳು, ಸಾಂವಿಧಾನಿಕ ಮೌಲ್ಯಗಳು, ಭ್ರಾತೃತ್ವ, ಸಾಮಾಜಿಕ ನ್ಯಾಯ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ “ಸಾಂವಿಧಾನಿಕ ಮೌಲ್ಯಗಳ ಅನುಷ್ಠಾನ ಮತ್ತು ಭ್ರಾತೃತ್ವ ಕುರಿತು ಯುವಕ-ಯುವತಿಯರಿಗಾಗಿ ಯುವಜನ ಶಿಬಿರ”ವನ್ನು ಜೂ.21ರಂದು ಬೆಳಿಗ್ಗೆ 10 ಗಂಟೆಗೆ ತಾಲೂಕಿನ ಕಕ್ಕಿಹಳ್ಳಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ಆಯೋಜಿಸಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ವೇದಿಕೆಯ ಸಂಚಾಲಕ ಭೀಮಾಶಂಕರ ಪಾಣೇಗಾಂವ ತಿಳಿಸಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಐಡಿವೈಒ (ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ) ಆಶ್ರಯದಲ್ಲಿ ಹಾಗೂ ಸಂವಿಧಾನ ಸಂರಕ್ಷಣಾ ವೇದಿಕೆ ವತಿಯಿಂದ, ಬಳಗೇರಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಶಿಬಿರ ನಡೆಯಲಿದೆ ಎಂದು ಹೇಳಿದರು.
ಯುವಜನರಲ್ಲಿ ಸಂವಿಧಾನಿಕ ಮೌಲ್ಯಗಳು, ಪ್ರಜಾಸತ್ತಾತ್ಮಕ ಚಿಂತನೆ, ಭ್ರಾತೃತ್ವ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ವಿವಿಧ ಉಪನ್ಯಾಸಗಳು, ಸಂವಾದಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಿರುಪತಿ ತಲ್ಲೂರ ಸ್ವಾಗತ ಭಾಷಣ ಮಾಡಲಿದ್ದು, ಬಳಗೇರಿ ಗ್ರಾಮ ಆಡಳಿತ ಅಧಿಕಾರಿ ರಾಣಿ ಹಳ್ಳಿ ನಿರೂಪಣೆ ಮಾಡಲಿದ್ದಾರೆ. ಭೀಮಾಶಂಕರ ಪಾಣೇಗಾಂವ ಪ್ರಾಸ್ತಾವಿಕ ನುಡಿ ಆಡಲಿದ್ದು, ಪತ್ರಕರ್ತ ಚಂದ್ರು ಆರ್. ಭಾನಾಪುರ ಅವರು ಭಾರತದ ಸಂವಿಧಾನದ ಪೀಠಿಕೆಯ ಸಾಮೂಹಿಕ ವಾಚನಕ್ಕೆ ನೇತೃತ್ವ ವಹಿಸಲಿದ್ದಾರೆ.
ಜಾನಪದ ಗಾಯಕಿ ಗೌರಿ ಗೋನಾಳ ಹಾಗೂ ಕೊಪ್ಪಳ ತಂಡದಿಂದ ಸಂವಿಧಾನ ಜಾಗೃತಿ ಗೀತೆಗಳ ಗಾಯನ ನಡೆಯಲಿದೆ. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಜೀವನ್ ಸಾಬ್ ವಾಲಿಕಾರ ಅವರು ಭ್ರಾತೃತ್ವ ಕುರಿತು ಸಂವಾದ ಮತ್ತು ಗುಂಪು ಚಟುವಟಿಕೆಗಳನ್ನು ನಡೆಸಿಕೊಡಲಿದ್ದಾರೆ.
ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಯುವಜನರ ಸಮಸ್ಯೆಗಳು, ಸವಾಲುಗಳು ಮತ್ತು ಪರಿಹಾರಗಳ ಕುರಿತು ಮುಕ್ತ ಚರ್ಚೆ ನಡೆಸಲಿದ್ದಾರೆ. ವೈಜ್ಞಾನಿಕ ಚಿಂತಕ ಆರ್.ವಿ.ಕಾಮನೂರ ಅವರು “ಪವಾಡ ಬಯಲು–ರಹಸ್ಯ” ಕಾರ್ಯಕ್ರಮದ ಮೂಲಕ ವೈಜ್ಞಾನಿಕ ಮನೋಭಾವದ ಕುರಿತು ಜಾಗೃತಿ ಮೂಡಿಸಲಿದ್ದಾರೆ.
ಬಳಿಕ “ಮಾರ್ಚ್ 22” ಚಲನಚಿತ್ರ ಪ್ರದರ್ಶನ ಹಾಗೂ ಕೋಮು ಸೌಹಾರ್ದತೆ ಕುರಿತು ಸಂವಾದವೂ ನಡೆಯಲಿದೆ. ಈಗಾಗಲೇ 40 ರಿಂದ 50 ಯುವಕ-ಯುವತಿಯರು ಶಿಬಿರಕ್ಕೆ ನೋಂದಣಿ ಮಾಡಿಕೊಂಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ನಡೆಯುತ್ತಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಭಾಗವಹಿಸುವ ಎಲ್ಲರಿಗೂ ಭಾಗವಹಿಸುವಿಕೆಯ ಪ್ರಮಾಣ ಪತ್ರ ವಿತರಿಸಲಾಗುವುದು. ಬಳಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಕ್ಕಿಹಳ್ಳಿ, ಬಳಗೇರಿ, ಕೋನಾಪುರ, ಹರಿಶಂಕರ ಬಂಡಿ ಹಾಗೂ ಚನ್ನಪ್ಪನಹಳ್ಳಿ ಗ್ರಾಮಗಳ ವಿದ್ಯಾರ್ಥಿಗಳು, ಯುವಕರು, ಯುವತಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಭೀಮಾಶಂಕರ ಪಾಣೇಗಾಂವ ಮನವಿ ಮಾಡಿದ್ದಾರೆ.






