KPSC ಅಕ್ರಮ ನೇಮಕಾತಿ ಪ್ರಕರಣ : ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಡಾ. ಶಾಂತಾ ಹೊಸಮನಿ

ಡಾ. ಶಾಂತಾ ಹೊಸಮನಿ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ( KPSC) ಯಲ್ಲಿ ವಿವಿಧ ನೇಮಕಾತಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಆಯೋಗದ ಸದಸ್ಯೆ ಡಾ ಶಾಂತ ಹೊಸಮನಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಪಶುವೈದ್ಯಾಧಿಕಾರಿ ಹಾಗೂ ಕೆ ಎ ಎಸ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಸಂಬಂಧ ಡಾ ಶಾಂತ ಹೊಸಮನಿ ವಿರುದ್ದ ವಿಧಾನಸೌಧ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಇದರ ತನಿಖೆಯನ್ನ ಸಿಐಡಿ ಹಾಗೂ ಇ.ಡಿ ಕೈಗೆತ್ತಿಕೊಳ್ಳುತ್ತಿದ್ದಂತೆ ಶಾಂತ ಹೊಸಮನಿ ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು.
ಈ ಹಿನ್ನಲೆ ಹೈಕೋರ್ಟ್ ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಅಭ್ಯರ್ಥಿಗಳಿಂದ ಹಣ ಪಡೆದು ಹುದ್ದೆ ನೀಡಿದ ಹಾಗೂ ಅಭ್ಯರ್ಥಿಗಳೊಂದಿಗೆ ಸಾಕಷ್ಟು ಬಾರಿ ಮಾತನಾಡಿರುವ ಗಂಭೀರ ಆರೋಪಗಳು ಶಾಂತಹೊಸಮನಿ ವಿರುದ್ದ ಇದೆ. ಜೊತೆಗೆ ಸಿಐಡಿ ನೊಟೀಸ್ ನೀಡಿದ್ದರು ವಿಚಾರಣೆಗೆ ಹಾಜರಾಗದ ಹಿನ್ನಲೆ ಇವರ ವಿರುದ್ದ ಲುಕ್ ಔಟ್ ನೊಟೀಸ್ ಕೂಡ ಹೊರಡಿಸಲಾಗಿತ್ತು. ಅಲ್ಲದೆ ಇವರ ಮನೆಗಳ ಮೇಲೆ ಸಿಐಡಿ , ಇಡಿ ಎರಡು ತನಿಖಾ ಸಂಸ್ಥೆಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದವು.




