1 ಎಕರೆ 32 ಗುಂಟೆ ವಿಸ್ತೀರ್ಣದ ಗುಂಡು ತೋಪು ಮಂಜೂರಿಗೆ ದಿವಂಗತ ರಾಮಕೃಷ್ಣ ಹೆಗಡೆ ಕುಟುಂಬ ಮನವಿ

ಸಾಂದರ್ಭಿಕ ಚಿತ್ರ (AI)
ಬೆಂಗಳೂರು : ಬೆಂಗಳೂರು ಉತ್ತರ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಕೃಷಿ ಉದ್ದೇಶಕ್ಕಾಗಿ ಈ ಹಿಂದೆಯೇ ವಿವಿಧ ಸರ್ವೇ ನಂಬರ್ಗಳಲ್ಲಿ ಖರೀದಿಸಿದ್ದ ಜಮೀನಿಗೆ ಹೊಂದಿಕೊಂಡಿರುವ 1 ಎಕರೆ 32 ಗುಂಟೆ ವಿಸ್ತೀರ್ಣದ ಖರಾಬು ಗುಂಡು ತೋಪನ್ನು ಮಂಜೂರು ಮಾಡಿಕೊಡಬೇಕು ಎಂದು ರಾಮಕೃಷ್ಣ ಹೆಗಡೆ ಅವರ ಪತ್ನಿ ಶಕುಂತಲಾ ಹೆಗಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಿಖಿತ ಪತ್ರದಲ್ಲಿ ಕೋರಿರುವುದು ಇದೀಗ ಬಹಿರಂಗವಾಗಿದೆ.
ಕಳೆದ ಒಂದು ತಿಂಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮಕೃಷ್ಣ ಹೆಗಡೆ ಅವರ ಪತ್ನಿ ಶಕುಂತಲಾ ಹೆಗಡೆ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಗೂ ಮುನ್ನ ಶಕುಂತಲಾ ಹೆಗಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಸಂಬಂಧ ಕೋರಿಕೆ ಸಲ್ಲಿಸಿದ್ದರು.
ಶಕುಂತಲಾ ಹೆಗಡೆ ಅವರು 2026ರ ಎಪ್ರಿಲ್ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋರಿಕೆ ಪತ್ರವನ್ನು ಸಲ್ಲಿಸಿದ್ದರು. ಇದೇ ಪತ್ರದ ಮೇಲೆ ಇದನ್ನು ಪರಿಶೀಲಿಸಿ ಕೂಡಲೇ ಕಡತ ಮಂಡಿಸಿ ಎಂದು ಸಿದ್ದರಾಮಯ್ಯ ಅವರು ತಮ್ಮ ಹಸ್ತಾಕ್ಷರದಲ್ಲಿ ಷರಾ ಬರೆದಿದ್ದರು.ಇದರ ಪ್ರತಿಯು "the-file.in"ಗೆ ಲಭ್ಯವಾಗಿದೆ.
ಕೋರಿಕೆಯಲ್ಲೇನಿದೆ?:
ಬೆಂಗಳೂರು ಉತ್ತರ ತಾಲೂಕು ಹೆಸರಘಟ್ಟ ಹೋಬಳಿಯ ಕಸಘಟ್ಟಪುರದ ಗ್ರಾಮದಲ್ಲಿ ರಾಮಕೃಷ್ಣ ಹೆಗಡೆ ಅವರು ಕೃಷಿ ಉದ್ದೇಶಕ್ಕಾಗಿ ಸರ್ವೇ ನಂ.40, 44/2ಎ,44/2ಬಿ, 44/3, 44/4 ಮತ್ತು 38ರಲ್ಲಿನ ಜಮೀನು ಖರೀದಿಸಿದ್ದರು. ಇದರಲ್ಲಿ ಸರ್ವೇ ನಂಬರ್ಗೆ ಹೊಂದಿಕೊಂಡಂತೆ ಸರ್ವೇ ನಂಬರ್ 39ರಲ್ಲಿನ ಗುಂಡುತೋಪು ಸಹ ಹೊಂದಿಕೊಂಡಿದೆ.
‘ಪ್ರಸ್ತುತ ನಾವು ಈ ಖರಾಬು ಜಮೀನು ಸರ್ವೇ ನಂ. 39 ಸುತ್ತಲು ಕಂಬಿ ಬೇಲಿ ನಿರ್ಮಿಸಿದ್ದೇವೆ. ಈ ಜಮೀನಿಗೆ ಹೊರಗಿನಿಂದ ಯಾವುದೇ ಪ್ರವೇಶ ಮಾರ್ಗವಿಲ್ಲ. ಆದ್ದರಿಂದ ಈ ಜಮೀನನ್ನು ನಮಗೆ ಸಮಂಜಸ ಬೆಲೆಗೆ ಮಂಜೂರು ಮಾಡುವಂತೆ ವಿನಂತಿಸಿಕೊಳ್ಳುತ್ತೇವೆ. ನಿಮ್ಮಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇವೆ’ ಎಂದು ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ.
ಶಕುಂತಲಾ ಹೆಗಡೆ ಅವರು ಪತ್ರದಲ್ಲಿ ನಮೂದಿಸಿರುವ ಸರ್ವೆನಂಬರ್ಗಳಲ್ಲಿನ ಜಮೀನುಗಳನ್ನು ರಾಮಕೃಷ್ಣ ಹೆಗಡೆ ಅವರು ಯಾವ ವರ್ಷದಲ್ಲಿ ಖರೀದಿಸಿದ್ದರು ಎಂಬ ಬಗ್ಗೆ ಯಾವುದೇ ವಿವರ ಮತ್ತು ಮಾಹಿತಿಯನ್ನು ಹಂಚಿಕೊಂಡಿಲ್ಲ. ಈ ಬಗ್ಗೆ "the-file.in", ಶಕುಂತಲಾ ಹೆಗಡೆ ಅವರ ಮನೆಯ ದೂರವಾಣಿ ಸಂಖ್ಯೆ (23613737) ಗೆ ಕರೆ ಮಾಡಿತ್ತು. ಆದರೆ ಈ ನಂಬರ್ ಅಸ್ತಿತ್ವದಲ್ಲಿ ಇಲ್ಲ ಎಂದು ಕಂಡು ಬಂದಿದೆ.
ಶಕುಂತಲ ಹೆಗಡೆ ಅವರ ಕೋರಿಕೆ ಪತ್ರದಲ್ಲಿನ ಸರ್ವೇ ನಂಬರ್ಗಳನ್ನು "the-file.in" ಭೂಮಿ ತಂತ್ರಾಂಶದಲ್ಲಿ ಪರಿಶೀಲಿಸಿತ್ತು. ಈ ಸರ್ವೇ ನಂಬರ್ಗಳ ಜಮೀನುಗಳಲ್ಲಿ ಹುಣಸೆ, ತೆಂಗು ಮತ್ತು ಮಾವು ಫಸಲು ಹೊಂದಿರುವುದು ಭೂಮಿ ದಾಖಲೆಗಳಿಂದ ತಿಳಿದು ಬಂದಿದೆ.
ಗುಂಡು ತೋಪು ಮಂಜೂರು ಮಾಡಲು ಸಾಧ್ಯವೇ?:
ಹಳ್ಳಿಗಳಲ್ಲಿ ಮರಗಳು ಮತ್ತು ದನಕರುಗಳ ಆಶ್ರಯಕ್ಕಾಗಿಯೇ ಗುಂಡುತೋಪುಗಳಿವೆ. ಇಂತಹ ಗುಂಡುತೋಪುಗಳು ತನ್ನ ಸಂಪೂರ್ಣ ಗುಣಲಕ್ಷಣಗಳನ್ನು ಕಳೆದುಕೊಂಡಿದ್ದರೆ ಮಾತ್ರ ವಿಶೇಷ ನಿಯಮಗಳಡಿಯಲ್ಲಿ ಮಂಜೂರು ಮಾಡಲು ಅವಕಾಶಗಳಿವೆ. ಇದಕ್ಕೆ ಗ್ರಾಮಸ್ಥರ ಅಥವಾ ಗ್ರಾಮ ಪಂಚಾಯತ್ನ ಆಕ್ಷೇಪಣೆ ಇರಬಾರದು. ಅಲ್ಲದೇ ಇದಕ್ಕೆ ಜಿಲ್ಲಾ ಪಂಚಾಯತ್ನ ಅನುಮೋದನೆಯೂ ಅವಶ್ಯಕ. ಜಿಲ್ಲಾ ಪಂಚಾಯತ್ನಿಂದ ಅನುಮತಿ ಪಡೆದಕೊಂಡ ನಂತರವಷ್ಟೆ ಗುಂಡುತೋಪು ಮಂಜೂರಾತಿ ಪ್ರಸ್ತಾವಕ್ಕೆ ಕಂದಾಯ ಇಲಾಖೆಯ ಮೂಲಕವೇ ಅಂತಿಮ ಅನುಮೋದನೆ ನೀಡಬೇಕು. ಗುಂಡುತೋಪು ಮತ್ತು ಖರಾಬು ಜಮೀನುಗಳ ಮಂಜೂರಾತಿ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಚರ್ಚಿಸಿದ್ದರು. ರಾಜ್ಯದಲ್ಲಿ ಹಲವರ ಜಮೀನಿನಲ್ಲೇ ಖರಾಬು ಭೂಮಿ ಕೂಡ ಇರುತ್ತದೆ. ಇದನ್ನು ಕೆಲವರು ತಮ್ಮ ಸ್ವಾಧೀನಪಡಿಸಿಕೊಂಡಿರುವ ಉದಾಹರಣೆಗಳೂ ಇವೆ. ಸಾಮಾನ್ಯವಾಗಿ ಈ ಖರಾಬು ಜಮೀನಿನ ವಿಚಾರವಾಗಿ ಸಾಕಷ್ಟು ಗೊಂದಲಗಳಿವೆ. ಖರಾಬು ಜಮೀನನ್ನು ಮಂಜೂರು ಮಾಡಿಸಿಕೊಳ್ಳಬಹುದೇ ಎಂಬ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು.
ಈ ಬಗ್ಗೆ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಅವರು ಖರಾಬು ಜಮೀನಿನ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ಸಚಿವ ಕೃಷ್ಣಬೈರೇಗೌಡ ಅವರು ಜಂಗಲ್ ಅಥವಾ ಬಿ-ಖರಾಬು ಜಮೀನು ಮಂಜೂರಾತಿ ವಿಚಾರದಲ್ಲಿ ಯಾವುದೋ ಕಾಲದಲ್ಲಿ ತಪ್ಪಾಗಿದೆ. ಆಗಿನ ಸರಕಾರ ಸರಿಯಾದ ಹೆಜ್ಜೆಯನ್ನು ಇಟ್ಟಿಲ್ಲ. ಆದರೆ, ಅದನ್ನು ನಾವು ಸರಿಮಾಡುವ ಕೆಲಸದಲ್ಲಿದ್ದೇವೆ. ಈಗಾಗಲೇ ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ಇದರ ನೈಜತೆ ಪರಿಶೀಲಿಸುವ ಜವಾಬ್ದಾರಿ ಕೊಟ್ಟಿದ್ದೇವೆ. ಇದರ ಬಗ್ಗೆ ತನಿಖೆ ಆರಂಭವಾಗಿದೆ. ಆದರೆ, ಇನ್ನೂ ಪ್ರಗತಿ ಆಗಿಲ್ಲ. ಈ ತನಿಖೆಯನ್ನು ಶೀಘ್ರದಲ್ಲೇ ಮುಗಿಸಲು ಸೂಚಿಸಿದ್ದೇನೆ’ ಎಂದು ಸದನದಲ್ಲಿ ಹೇಳಿಕೆ ನೀಡಿದ್ದರು.
ಖರಾಬು ಜಮೀನುಗಳ ಪೋಡಿ ಬಂದ್
ಜಂಗಲ್ ಅಥವಾ ಬಿ-ಖರಾಬು ಜಮೀನನ್ನು ಯಾರಿಗೂ ಮಂಜೂರು ಮಾಡಲು ಸಾಧ್ಯವಿಲ್ಲ. ಈ ಹಿಂದೆ ಇಂತಹ ಕೆಲವು ಪ್ರಕರಣಗಳು ಕಂಡು ಬಂದಿದ್ದವು. ಈ ಬಗ್ಗೆ ತನಿಖೆಯನ್ನೂ ನಡೆಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದರು. ಇಂತಹ ಜಮೀನುಗಳು ಪೋಡಿ ಆಗುವುದು ಅಥವಾ ಭೂ ವ್ಯವಹಾರ ನಿಲ್ಲಿಸಬೇಕು ಎಂಬ ಕೂಗು ಸಹ ಕೇಳಿಬಂದಿತ್ತು. ಈ ಬಗ್ಗೆ ಆಯುಕ್ತರು ಲಿಖಿತ ಸೂಚನೆ ನೀಡಿದ್ದರು. ಈಗಾಗಲೇ ಮಂಜೂರಾವರಿಗೆ ಆ ಜಮೀನು ಗ್ರ್ಯಾಂಟ್ ಆಗಿರುವುದರಿಂದ ಅವರ ಹಕ್ಕನ್ನು ಸರಕಾರ ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಕಾನೂನಾತ್ಮಕ ಸೂಚನೆ ನೀಡಿದ್ದಾರೆ. ಅವರ ಪತ್ರ ಕಾನೂನಿಗೆ ಬದ್ಧವಾಗಿದೆ ಎಂದು ವಿವರಿಸಿದ್ದರು.






