5 ರಿಂದ 17 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ಅಪ್ ಡೇಟ್ ಇನ್ನು ಮುಂದೆ ಉಚಿತ

ಆಧಾರ್ ಕಾರ್ಡ್ | ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ನ.18: ಐದರಿಂದ 17 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ‘ಬಾಲ’ ಅಥವಾ ನೀಲಿ ಆಧಾರ್ ಕಾರ್ಡ್ ಗಳ ಬಯೋಮೆಟ್ರಿಕ್ ಅನ್ನು ಕಡ್ಡಾಯವಾಗಿ ಅಪ್ ಡೇಟ್ (ಎಂಬಿಯು)ಮಾಡುವುದಕ್ಕೆ ವಿಧಿಸಲಾಗುವ ಎಲ್ಲಾ ಶುಲ್ಕಗಳನ್ನು ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ (ಯುಐಡಿಎಐ) ಶುಕ್ರವಾರ ರದ್ದುಪಡಿಸಿದೆ.
ಕ್ರಮವಾಗಿ 5ರಿಂದ 7 ಹಾಗೂ 15-17 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ಗಳಿಗೆ ನಡೆಸಲಾಗುವ ಮೊದಲ ಹಾಗೂ ಎರಡನೇ ಎಂಬಿಯುಗಳು ಇನ್ನು ಮುಂದೆ ಸಂಪೂರ್ಣವಾಗಿ ಉಚಿತವಾಗಿರುತ್ತವೆ ಎಂದು ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಐದು ವರ್ಷ ಪ್ರಾಯದೊಳಗಿನ ಮಗುವನ್ನು ಆಧಾರ್ ಗೆ ನೋಂದಾಯಿಸಿಕೊಳ್ಳುವಾಗ ಅದರ ಭಾವಚಿತ್ರ, ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಹಾಗೂ ಜನ್ಮ ಪ್ರಮಾಣಪತ್ರವನ್ನು ಒದಗಿಸಬೇಕಾಗುತ್ತದೆ. ಆದರೆ ಈ ಪ್ರಾಯದಲ್ಲಿ ಮಕ್ಕಳಿಗೆ ಪ್ರಬುದ್ಧತೆಯಿರದ ಕಾರಣ ಅವರಿಂದ ಬಯೋಮೆಟ್ರಿಕ್ ಪಡೆದುಕೊಳ್ಳಲಾಗುವುದಿಲ್ಲ.
ಮಗುವಿಗೆ ಐದು ವರ್ಷ ವಯಸ್ಸಾದಾಗ ಅದು ಫೋಟೋ ಜೊತೆಗೆ ಬೆರಳಚ್ಚು ಮತ್ತು ಐರಿಸ್ (ಕಣ್ಣಿನ ಗುರುತು) ದತ್ತಾಂಶ ಸಹಿತ ಎಲ್ಲಾ ಬಯೋಮೆಟ್ರಿಕ್ ವಿವರಗಳನ್ನು ದಾಖಲಿಸಬೇಕಾಗುತ್ತದೆ. ಇದನ್ನು ಎಂಬಿಯು 1 ಕರೆಯಲಾಗುತ್ತದೆ.
ಆದರೆ ಆಧಾರ್ ಸಂಖ್ಯೆ ಹೊಂದಿದಾತನಿಗೆ ಹದಿನೈದು ವರ್ಷ ವಯಸ್ಸಾದಾಗ ಆತ ಬಯೋಮೆಟ್ರಿಕ್ ಗಳನ್ನು ಮತ್ತೆ ಅಪ್ ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಎಂಬಿಯು 2 ಎಂದು ಕರೆಯಲಾಗುತ್ತದೆ
5ರಿಂದ 17 ವರ್ಷದೊಳಗಿನವರಿಗೆ ನಡೆಸಲಾಗುವ ಮೊದಲ ಹಾಗೂ ಎರಡನೇ ಕಡ್ಡಾಯ ಬಯೋಮೆಟ್ರಿಕ್ ಅಪ್ ಡೇಟ್ (ಎಂಬಿಯು) ಸಂಪೂರ್ಣ ಉಚಿತವಾಗಲಿದ್ದು, 6 ಕೋಟಿಗೂ ಅಧಿಕ ಮಕ್ಕಳಿಗೆ ಪ್ರಯೋಜನವಾಗಲಿದೆ.
ಈವರೆಗೆ ಎಂಬಿಯುವನ್ನು ಅಪ್ ಡೇಟ್ ಮಾಡದ ಅರ್ಹ ನೀಲಿ ಆಧಾರ್ ಕಾರ್ಡ್ ದಾರರು ತಮ್ಮ ಸಮೀಪದಲ್ಲಿರುವ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರವನ್ನು ಸಂದರ್ಶಿಸಬಹುದು. ಯುಐಡಿಎಐನ ಅಧಿಕೃತ ವೆಬ್ ಸೈಟ್ ನಿಂದ ವಿವರಗಳನ್ನು ಅವರು ಪಡೆಯಬಹುದಾಗಿದೆ.







