ಡಿಎಂಕೆ ಬಳಿಕ, ಎಸ್ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಪಶ್ಚಿಮ ಬಂಗಾಳದ ಕಾಂಗ್ರೆಸ್ ಘಟಕ

Photo credit: PTI
ಹೊಸದಿಲ್ಲಿ: ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ನಂತರ ಇದೀಗ ಪಶ್ಚಿಮ ಬಂಗಾಳ ಕಾಂಗ್ರೆಸ್ ಪಕ್ಷವೂ ಭಾರತ ಚುನಾವಣಾ ಆಯೋಗ (ಇಸಿಐ) ಆದೇಶಿಸಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಮತದಾರರ ಪಟ್ಟಿಯ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ಮತ್ತು ಲೋಪಗಳು ನಡೆಯುತ್ತಿರುವುದಾಗಿ ಆರೋಪಿಸಿರುವ ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕವು ಈ ಹಿನ್ನೆಲೆಯಲ್ಲಿ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಈಗಾಗಲೇ ಬಿಹಾರ ಎಸ್ಐಆರ್ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಮುಂದೆ ಅರ್ಜಿದಾರರ ಪರ ವಕೀಲರು ಈ ವಿಚಾರವನ್ನು ಪ್ರಸ್ತಾಪಿಸಿದರು. “ಬಿಹಾರ ಎಸ್ಐಆರ್ ವಿಚಾರಣೆಯನ್ನು ನಾಳೆಗೆ ಪಟ್ಟಿ ಮಾಡಲಾಗಿದೆ. ಅದೇ ದಿನ ಪಶ್ಚಿಮ ಬಂಗಾಳ ಎಸ್ಐಆರ್ ವಿಚಾರವನ್ನೂ ಸೇರಿಸಲು ಕೋರುತ್ತೇವೆ,” ಎಂದು ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಜನರು ಮತದಾರರ ಪಟ್ಟಿಯ ತಿದ್ದುಪಡಿ ಪ್ರಕ್ರಿಯೆಯಲ್ಲಿನ ಲೋಪದೋಷಗಳನ್ನು ಉಲ್ಲೇಖಿಸುತ್ತಿದ್ದು, ಪಕ್ಷವನ್ನು ಸಂಪರ್ಕಿಸುತ್ತಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಪಕ್ಷವು ಈ ವಿಷಯದಲ್ಲಿ ಹಸ್ತಕ್ಷೇಪ ಕೋರಿ ಸುಪ್ರೀಂ ಕೋರ್ಟ್ಗೆ ಹೋಗಬೇಕಾಯಿತು ಎಂದು ವಕೀಲರು ತಿಳಿಸಿದರು.
ಈ ವೇಳೆ ಪೀಠವು “ಪಶ್ಚಿಮ ಬಂಗಾಳ ವಿಷಯ ನಮ್ಮ ಮುಂದೆ ಬರಬೇಕೇ ಎಂಬ ನಿರ್ಧಾರ ಸಿಜೆಐಗೆ ಸೇರಿದೆ,” ಎಂದು ಸ್ಪಷ್ಟಪಡಿಸಿತು. ಬಳಿಕ, ಬಿಹಾರ ಎಸ್ಐಆರ್ ಪ್ರಕರಣದ ಜೊತೆಗೆ ಈ ಅರ್ಜಿಯನ್ನು ಮಂಗಳವಾರ ಪಟ್ಟಿ ಮಾಡಲು ನ್ಯಾಯಾಲಯ ಒಪ್ಪಿಕೊಂಡಿತು.
ಚುನಾವಣಾ ಆಯೋಗವು 2025ರ ಜೂನ್ನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಆದೇಶ ನೀಡಿತ್ತು. ಆ ಆದೇಶವನ್ನು ಪ್ರಶ್ನಿಸಿ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹಾಗೂ ನ್ಯಾಷನಲ್ ಫೆಡರೇಶನ್ ಫಾರ್ ಇಂಡಿಯನ್ ವುಮೆನ್ (ಎನ್ಎಫ್ಐಡಬ್ಲ್ಯೂ) ಸೇರಿದಂತೆ ಹಲವಾರು ಸಂಸ್ಥೆಗಳು ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದರೂ, ಉನ್ನತ ನ್ಯಾಯಾಲಯವು ತಡೆಯಾಜ್ಞೆ ನೀಡಿರಲಿಲ್ಲ.
ಇದರಿಂದ ಭಾರತೀಯ ಚುನಾವಣಾ ಆಯೋಗವು ಬಿಹಾರದಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ಮುಂದುವರಿಸಿತು. ಬಳಿಕ ಅಕ್ಟೋಬರ್ 27ರಂದು ಆಯೋಗವು ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಪರಿಷ್ಕರಣೆಯನ್ನು ವಿಸ್ತರಿಸಿತು.
ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಈಗಾಗಲೇ ಈ ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಇದೀಗ ಪಶ್ಚಿಮ ಬಂಗಾಳ ಕಾಂಗ್ರೆಸ್ ಪಕ್ಷವೂ ಸುಪ್ರೀಂ ಮೆಟ್ಟಿಲು ಹತ್ತಿದೆ.







