ಉಡುಪಿ ನಗರಸಭೆ ರಸ್ತೆಗಳ ಅವ್ಯವಸ್ಥೆಯನ್ನು ಸರಿಪಡಿಸಲು ಆಗ್ರಹಿಸಿ ಸಚಿವರಿಗೆ ಪತ್ರ

ಮಂಜುನಾಥ್ ಭಂಡಾರಿ
ಉಡುಪಿ : ಉಡುಪಿ ನಗರಸಭೆ ರಸ್ತೆಗಳ ಅವ್ಯವಸ್ಥೆಯನ್ನು ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿ ವಿಧಾನ ಪರಿಷತ್ತು ಸದಸ್ಯ ಮಂಜುನಾಥ್ ಭಂಡಾರಿ ಅವರು, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂಬಂಧ ʼವಾರ್ತಾಭಾರತಿʼಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿ ಸಚಿವರಿಗೆ ಪತ್ರ ಬರೆದಿರುವ ಅವರು, ಈ ಬಾರಿ ಕರಾವಳಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹೀಗೆ ನಿರಂತರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಉಡುಪಿ ನಗರದ ಪ್ರಮುಖ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಕಿತ್ತು ಹೋಗಿ ಹೊಂಡ ಗುಂಡಿಗಳಿಂದ ತುಂಬಿ ಹೋಗಿವೆ. ಇದರಿಂದ ವಾಹನ ಸಂಚಾರಕ್ಕೆ ಬಹಳಷ್ಟು ತೊಡಕಾಗಿದೆ. ಮಳೆಗಾಲಕ್ಕೆ ಎರಡು ಮೂರು ತಿಂಗಳ ಹಿಂದೆಯಷ್ಟೇ ಉಡುಪಿ ನಗರಸಭೆಯಿಂದ ರಸ್ತೆಗಳಿಗೆ ತೇಪೆ ಹಾಕುವ ಕಾರ್ಯ ಮಾಡಲಾಗಿತ್ತು. ಆದರೆ ನಿರಂತರ ಮಳೆಯಿಂದಾಗಿ ಇಲ್ಲಿನ ಡಾಂಬರು ಕಿತ್ತು ಹೋಗಿ ಮತ್ತೆ ಹೊಂಡಮಯವಾಗಿವೆ.
ನಗರದ ಕಿನ್ನಿಮುಲ್ಕಿ ಸ್ವಾಗತ ಗೋಪುರ ಸಮೀಪದ ರಸ್ತೆ ಸಂಪೂರ್ಣ ಹಾಳಾಗಿದ್ದು, ಕನ್ನರ್ಪಾಡಿ ಯಿಂದ ಕಿನ್ನಿಮುಲ್ಕಿವರೆಗಿನ ರಸ್ತೆಯುದ್ದಕ್ಕೂ ಬೃಹತ್ ಆಕಾರದ ಹೊಂಡಗಳು ಸೃಷ್ಟಿಯಾಗಿವೆ. ಈ ಬಗ್ಗೆ ವಾಹನ ಸವಾರರಿಗೆ ಅಪಾಯದ ಎಚ್ಚರಿಕೆ ನೀಡುವ ಹಿನ್ನೆಲೆಯಲ್ಲಿ ಸ್ಥಳೀಯರು ಹೊಂಡಕ್ಕೆ ಗಿಡಗಳನ್ನು ನೆಟ್ಟಿದ್ದಾರೆ. ಇದೇ ವಾರ್ಡ್ ಗೋವಿಂದ ಕಲ್ಯಾಣ ಮಂಟಪ ರಸ್ತೆ ಕೂಡ ಮಳೆಯಿಂದ ಸಂಪೂರ್ಣ ಹಾಳಾಗಿದೆ.
ನಗರದ ಜೋಡುರಸ್ತೆಯ ಜಂಕ್ಷನ್ನಲ್ಲಿಯೇ ದೊಡ್ಡ ಹೊಂಡ ಬಿದ್ದಿರುವುದರಿಂದ ಹಳೆ ತಾಲೂಕು ಕಚೇರಿಯಿಂದ ಬಂದ ವಾಹನಗಳು ಯೂ ಟರ್ನ್ ಮಾಡಲು ಮತ್ತು ಅಜ್ಜರಕಾಡು ರಸ್ತೆಯಿಂದ ಕೋರ್ಟ್ ರಸ್ತೆಗೆ ಹೋಗುವ ವಾಹನಗಳಿಗೆ ತೊಂದರೆಯಾಗುತ್ತಿದೆ. ಹೊಂಡದಲ್ಲಿ ನೀರು ತುಂಬಿರುವುದರಿಂದ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದು ಕೊಳ್ಳುತ್ತಿರುವುದಾಗಿ ವರದಿಯಾಗಿದೆ.
ಅಪಘಾತಗಳಾಗಿ ಹೆಚ್ಚಿನ ಜೀವಹಾನಿಯಾಗುವುದನ್ನು ತಡೆಯಲು ಸಾರ್ವಜನಿಕ ಹಿತದೃಷ್ಟಿಯಿಂದ ಉಡುಪಿ ನಗರಸಭೆ ರಸ್ತೆಗಳ ಅವ್ಯವಸ್ಥೆಯನ್ನು ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕಾಗಿ ಈ ಮೂಲಕ ತಮ್ಮನ್ನು ಕೋರುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.







