Friendflation ಕಾರಣದಿಂದ ಜನರು ಒಂಟಿಯಾಗುತ್ತಿದ್ದಾರೆಯೆ?

Photo Credit : chatgpt.com
ವರದಿಗಳು ಹೇಳುವ ಪ್ರಕಾರ Friendflation ಕಾರಣದಿಂದ ಜನರು ಒಂಟಿಯಾಗುತ್ತಿದ್ದಾರೆ. ಆದರೆ ಯುವಜನತೆಯ ಪ್ರಕಾರ ಒಬ್ಬಂಟಿಯಾಗಿ ತಿರುಗುವುದರಲ್ಲೇ ಆನಂದವಿದೆ! ಏನಿದು Friendflation?
ಇತ್ತೀಚೆಗೆ Friendflation ಎನ್ನುವ ಶಬ್ದ ಬಹಳ ಚರ್ಚೆಯಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಜನರು Friendflation ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ‘ರೆಡಿಟ್’ ಸಾಮಾಜಿಕ ಜಾಲತಾಣದಲ್ಲಿ ಜನರು ಪರಸ್ಪರ ಭೇಟಿಯಾಗಲು ಸಾಧ್ಯವಿರದೆ ಇರುವ ಬಗ್ಗೆ ಚರ್ಚಿಸುತ್ತಿದ್ದಾರೆ. ಆಧುನಿಕ ಜಗತ್ತಿನಲ್ಲಿ ಸ್ನೇಹವನ್ನು ಉಳಿಸಿಕೊಳ್ಳುವುದು ಜೇಬಿಗೆ ಭಾರವಾಗುತ್ತಿದೆಯೆ?
ಏನಿದು Friendflation?
ವಾಸ್ತವದಲ್ಲಿ ಹಣದುಬ್ಬರವು ಸ್ನೇಹಕ್ಕೆ ಅಡ್ಡಿಯಾಗುವುದನ್ನು Friendflation ಎಂದು ಕರೆಯಲಾಗುತ್ತಿದೆ. ಕೆಲವು ಲೇಖನಗಳು ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಹೇಳಿರುವ ಪ್ರಕಾರ ಹಣದುಬ್ಬರದಿಂದಾಗಿ ಯುವ ಭಾರತೀಯರ ನಿತ್ಯ ಜೀವನದಲ್ಲಿ ಏಕಾಂಗಿತ ಹೆಚ್ಚಾಗುತ್ತಿದೆ ಮತ್ತು ಅದಕ್ಕೆ ಕಾರಣ ಹಣದುಬ್ಬರ.
ಬಹಳಷ್ಟು ಯುವ ಭಾರತೀಯರು ತಮ್ಮ ಸ್ನೇಹಿತರನ್ನು ಭೇಟಿಯಾಗಲು ಹಿಂಜರಿಯುತ್ತಾರೆ. ಮುಖ್ಯ ಕಾರಣ ಹಣದುಬ್ಬರ. ಜೊತೆಗೂಡಿ ಸಾಗುವ ಯೋಜನೆ ʼಪಾಕೆಟ್ ಫ್ರೆಂಡ್ಲಿʼಯಾಗಿ ಇರದೆ ಇರುವುದು. ದುಬಾರಿ ಪಾರ್ಟಿಗಳಿಗೆ ಸ್ನೇಹಿತರು ಕರೆದಾಗ ಹೋಗದೆ ಏಕಾಂಗಿಯಾಗಿ ಕಳೆಯುವುದನ್ನು Friendflation ಎಂದು ಕರೆಯಲಾಗುತ್ತಿದೆ.
ಸ್ನೇಹಕ್ಕೆ ಹಣದುಬ್ಬರ ಅಡ್ಡಿಯಾಗದು
ಆದರೆ ಬಹುತೇಕ ಭಾರತೀಯ ಮಧ್ಯಮ ವರ್ಗದವರ ಪ್ರಕಾರ ಇಂತಹ Friendflation ಅನ್ನೋ ಪದ ತಮಗೆ ಹೊಂದಿಕೊಳ್ಳುವುದಿಲ್ಲ. ಬೆಂಗಳೂರಿನ ಜ್ಯೋತಿ ಎಂಬವರು ಹೇಳುವ ಪ್ರಕಾರ, ಉನ್ನತ ವರ್ಗ ಮತ್ತು ಮಧ್ಯಮ ವರ್ಗದವರ ನಡುವೆ ಸ್ನೇಹವಿದ್ದರೆ ಇಂತಹ ಸಮಸ್ಯೆಗಳು ಬರಬಹುದು. “ಸಮಾನ ಮನಸ್ಕರ ನಡುವೆ ಇಂತಹ ಸಮಸ್ಯೆ ಬರುವುದಿಲ್ಲ. ನಾನು ಬಜೆಟ್ ಫ್ರೆಂಡ್ಲಿ ಔಟಿಂಗ್ ಬಯಸುತ್ತೇನೆ. ದುಬಾರಿ ಪಾರ್ಟಿಗಳಿಗೆ ಹೋಗಲು ಕರೆದರೆ ಖಂಡಿತಾ ಇಲ್ಲ ಎನ್ನುತ್ತೇನೆ, ಏಕೆಂದರೆ ನಾನು ಮದ್ಯಪಾನ ಮಾಡುವುದಿಲ್ಲ, ಡ್ಯಾನ್ಸ್ ಮಾಡುವುದಿಲ್ಲ. ಹೀಗಾಗಿ ದುಬಾರಿ ಪಾರ್ಟಿಗಳಿಗೆ ಹೋಗುವ ಅಗತ್ಯವಿಲ್ಲ.”
ಜ್ಯೋತಿ ಹೇಳುವ ಪ್ರಕಾರ ಇದೊಂದು ವಿಪರೀತ ಕಲ್ಪನೆ. “Friendflation ಅನ್ನೋ ಪದ ಸೂಕ್ತವಲ್ಲ. ಬೆಂಗಳೂರಿನಂತಹ ನಿಬಿಡ ಜೀವನದಲ್ಲಿ ಎಲ್ಲರೂ ಯಾವಾಗಲೂ ಜೊತೆಗಿರಲು ಸಾಧ್ಯವಿಲ್ಲ. ತಮ್ಮ ಕೆಲಸಗಳನ್ನು ಏಕಾಂಗಿಯಾಗಿ ಮಾಡಿಕೊಳ್ಳಲು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ.”
ಬಹುತೇಕರು ಹೇಳುವ ಪ್ರಕಾರ ಹೈಫೈ ಜನರ ನಡುವೆ ಮಧ್ಯಮ ವರ್ಗದವರು ಸೇರಿಕೊಂಡರೆ ಇಂತಹ ಸಮಸ್ಯೆ ಸೃಷ್ಟಿಯಾಗುತ್ತದೆ. ಆದರೆ ಹಣದುಬ್ಬರ ಸ್ನೇಹಕ್ಕೆ ಅಡ್ಡಿಯಾಗಿಲ್ಲ. ಸ್ನೇಹಿತರು ಪರಸ್ಪರ ಭೇಟಿಯಾಗಬೇಕೆಂದರೆ ಸಮಯ ಅಗತ್ಯವೇ ವಿನಾ ಹಣ ಮುಖ್ಯವಾಗುವುದಿಲ್ಲ.
ಸಮಾನ ಮನಸ್ಕರ ನಡುವೆ ಹಣದುಬ್ಬರ ಸಮಸ್ಯೆಯಲ್ಲ
ಬೆಂಗಳೂರಿನ ಗೃಹಿಣಿ ಸ್ನೇಹ ಅವರಿಗೆ ಹಣದುಬ್ಬರ ಸ್ನೇಹಕ್ಕೆ ಅಡ್ಡಿಯಾಗಿಲ್ಲ. “ಸ್ನೇಹ ಯಾವಾಗಲೂ ಸಮಕಾಲೀನರ ನಡುವೆಯೇ ಆಗುತ್ತದೆ. ಬಜೆಟ್ ಫ್ರೆಂಡ್ಲಿಯಾಗಿ ಸ್ನೇಹಿತರನ್ನು ಭೇಟಿಯಾಗಲು ಹಲವು ದಾರಿಗಳಿರುತ್ತವೆ. ನಾನು ಕಂಡಂತೆ ಯುವಜನತೆ ತಮ್ಮ ಇಷ್ಟದ ರೀತಿಯಲ್ಲಿ ಬದುಕುತ್ತಿದ್ದಾರೆ. ಮಧ್ಯಮ ವರ್ಗದವವರೂ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ನನ್ನ ಅಣ್ಣನ ಮಕ್ಕಳು ಇತ್ತೀಚೆಗೆ ದುಬೈ ಹೋಗಿ ಬಂದರು. ಕಳೆದ ವಾರ ಮತ್ತೆ ಹಂಪಿಗೆ ಹೋಗಿದ್ದಾರೆ. ಸ್ನೇಹಿತರ ಜೊತೆಗೆ ಹೋಗುವಾಗ ಪಂಚತಾರಾ ಹೊಟೇಲ್ಗಳೇ ಬೇಕಿರುವುದಿಲ್ಲ. ಲಕ್ಸುರಿ ಹೊಟೇಲ್ ಬೇಕೆಂದು ಇರುವುದಿಲ್ಲ. ಜಾಣ್ಮೆಯಿಂದ ತಮ್ಮ ಪ್ರವಾಸವನ್ನು ಆಯೋಜಿಸುತ್ತಾರೆ. ಕೆಲವೊಮ್ಮೆ ಹಣಕಾಸಿನ ಸಮಸ್ಯೆಯಿಂದ ಪ್ರವಾಸಕ್ಕೆ ಬರಲು ಸಾಧ್ಯವಾಗದವರಿಗೆ ಇತರರು ನೆರವು ನೀಡಿ ಕರೆದೊಯ್ಯುವುದಿದೆ. ದುಬಾರಿ ಎನ್ನುವ ಕಾರಣದಿಂದ ಯಾರೂ ಊಟ-ಉಡುಗೆ ಬಿಟ್ಟಿಲ್ಲ, ಹಾಗೆಯೇ ಸುತ್ತಾಡಲು ಇಷ್ಟವಿರುವವರು ಏಕಾಂಗಿಯಾಗಿ ಇರುವುದಿಲ್ಲ. ಅವರು ತಿರುಗಾಡುತ್ತಲೇ ಇದ್ದಾರೆ. ಇಷ್ಟವಿಲ್ಲದವರು ವಿವಿಧ ಕಾರಣದಿಂದ ಏಕಾಂಗಿಯಾಗಿ ಇರಬಹುದು.”
ಸ್ನೇಹ ಅವರ ಪ್ರಕಾರ, “ಇತ್ತೀಚೆಗಿನ ದಿನಗಳಲ್ಲಿ ಯುವಜನತೆ ಷೇರುಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಾರೆ. ಅದರಿಂದಲೇ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಾರೆ. ಹೀಗಾಗಿ ಉದ್ಯೋಗದಿಂದ ಬಂದ ವೇತನ ಉಳಿತಾಯವಾಗುತ್ತಿರುತ್ತದೆ. ಖರ್ಚು ಮಾಡಲು ಇಷ್ಟವಿಲ್ಲದವರು ಮಾತ್ರ ದುಬಾರಿ ಆಯಿತು ಎಂದು ಸುಮ್ಮನಿರುತ್ತಾರೆ. ಯಾರೂ ಜೀವನವನ್ನು ಹೊರೆಯನ್ನಾಗಿ ಮಾಡಿಕೊಳ್ಳುವುದಿಲ್ಲ. ತಮ್ಮ ಆದಾಯಕ್ಕೆ ಸಮನಾಗಿ ಬದ್ಧತೆಗಳು ಇರುತ್ತವೆ. ಹೀಗಾಗಿ ಹಣದುಬ್ಬರದಿಂದ ಏಕಾಂತ ಕಾಡುತ್ತಿದೆ ಎನ್ನುವುದು ಸುಳ್ಳು.”
ಹಣವಿದ್ದರೂ ಸಮಯ ಇರುವುದಿಲ್ಲ
ಅನುವಾದಕ ವೃತ್ತಿಯಲ್ಲಿರುವ ಮೆಲ್ವಿನ್ ಅವರು ಹೇಳುವ ಪ್ರಕಾರ, ಸ್ನೇಹಿತರು ನಮ್ಮ ಸಮಕ್ಕೆ ವೆಚ್ಚ ಮಾಡಲು ಸಿದ್ಧರಿಲ್ಲದೆ ಇದ್ದಾಗ ಅಂತಹ ಸ್ನೇಹಿತರ ಜೊತೆಗೆ ಇರಲು ಸಾಧ್ಯವಾಗುವುದಿಲ್ಲ. “ನಮ್ಮ ತರಹವೇ ಖರ್ಚು ಮಾಡುವ ಗೆಳೆಯರು ಜೊತೆಗೆ ಇದ್ದರೆ ಹಣದುಬ್ಬರ ಏನೂ ಪರಿಣಾಮ ಬೀರುವುದಿಲ್ಲ. ಆದರೆ ನಮ್ಮನ್ನು ಲೂಟಿ ಮಾಡುವ ಗೆಳೆಯರಿದ್ದರೆ ಕಷ್ಟ. ಆದರೆ ಇತ್ತೀಚೆಗೆ ಸ್ನೇಹಿತರ ಜೊತೆಗೆ ಕಳೆಯಲು ಸಮಯ ಎಲ್ಲಿರುತ್ತದೆ? ಬಹಳಷ್ಟು ಬಾರಿ ಸಮಯ ಇದ್ದರೆ ಹಣ ಇರುವುದಿಲ್ಲ ಮತ್ತು ಹಣ ಇದ್ದರೆ ಸಮಯ ಇರುವುದಿಲ್ಲ” ಎನ್ನುತ್ತಾರೆ ಮೆಲ್ವಿನ್.
ಒಂಟಿಯಾಗಿ ಸುತ್ತುವವರಿಗೆ Friendflation ಅನ್ವಯಿಸುವುದಿಲ್ಲ
ತುಮಕೂರಿನವರಾದ ಸತೀಶ್ ಅವರು ಹೇಳುವ ಪ್ರಕಾರ Friendflation ಎನ್ನುವುದು ಸ್ವಲ್ಪ ಮಟ್ಟಿಗೆ ಪ್ರಯಾಣವನ್ನು ತಡೆಯಬಹುದು. ಆದರೆ ಒಬ್ಬಂಟಿಗರಾಗಿಯೇ ಪ್ರವಾಸ ಮಾಡುವ ಸತೀಶ್ ಅವರಿಗೆ Friendflation ಹೆಚ್ಚು ಪರಿಣಾಮ ಬೀರಿಲ್ಲ.
ಬೆಂಗಳೂರಿನ ನಿವಾಸಿಯಾಗಿರುವ ನಾಗರಾಜ್ ಅವರಿಗೆ Friendflation ಸಮಸ್ಯೆಯೇ ಆಗಿಲ್ಲ. “ದುಬಾರಿ ವೆಚ್ಚ ಮಾಡಬೇಕು ಎಂದುಕೊಂಡವರ ಜೊತೆಗೆ ಹೋಗೋದೇ ಇಲ್ಲ. ಅಂತಹವರನ್ನು ತಪ್ಪಿಸಿಕೊಳ್ಳುತ್ತೇವೆ. ಮುಖ್ಯವಾಗಿ ನಾನು ಒಬ್ಬಂಟಿಗನಾಗಿ ಸುತ್ತೋದರಿಂದ ಜಾಸ್ತಿ ಸಮಸ್ಯೆ ಆಗುತ್ತಿಲ್ಲ. Friendflation ತರುವಂತಹ ಸ್ನೇಹಿತರೇ ನನಗೆ ಇಲ್ಲ” ಎನ್ನುತ್ತಾರೆ ನಾಗರಾಜ್.
ಒಂಟಿತನ ಹೆಚ್ಚಾಗುತ್ತಿದೆ ಎನ್ನುವ WHO ವರದಿ
ಆದರೆ ಸಮೀಕ್ಷಾ ವರದಿಗಳು ಇದಕ್ಕೆ ತದ್ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿವೆ. 2025ರ ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿ ಹೇಳಿರುವ ಪ್ರಕಾರ, 2014 ಮತ್ತು 2023ರ ನಡುವೆ ನಡೆದ ಅಧ್ಯಯನದಲ್ಲಿ ಕಂಡುಕೊಂಡಿರುವ ಪ್ರಕಾರ ಜಾಗತಿಕವಾಗಿ ಆರು ಜನರಲ್ಲಿ ಒಬ್ಬರಿಗೆ ಒಂಟಿತನ ಕಾಡುತ್ತಿದೆ. ಯುವಜನರು ಮತ್ತು ಬಡದೇಶಗಳಲ್ಲಿರುವವರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. 2014-2019ರ ನಡುವೆ ಪ್ರತಿ ವರ್ಷ ಅಂದಾಜು 8,71,000 ಮರಣಗಳಿಗೂ ಒಂಟಿತನದ ಜೊತೆಗೆ ತಳಕು ಹಾಕಿ ನೋಡಲಾಗುತ್ತಿದೆ. ವರದಿಯ ಪ್ರಕಾರ ಜಾಗತಿಕವಾಗಿ 13ರಿಂದ 29ರ ವಯಸ್ಸಿನ ಯುವಕರು ಅತ್ಯಧಿಕ ಮಟ್ಟದಲ್ಲಿ ಒಂಟಿತನವನ್ನು ಎದುರಿಸಿದ್ದಾರೆ. ಕಡಿಮೆ ಆದಾಯದ ದೇಶಗಳಲ್ಲಿ ಈ ಹೊರೆ ಹೆಚ್ಚಾಗಿತ್ತು. ಕಡಿಮೆ ಆದಾಯದ ದೇಶಗಳಲ್ಲಿ ಶೇ 24ರಷ್ಟು ಮಂದಿಯ ಮೇಲೆ ಒಂಟಿತನ ಪರಿಣಾಮ ಬೀರಿದೆ. ಶ್ರೀಮಂತ ರಾಷ್ಟ್ರಗಳಲ್ಲಿ ಒಂಟಿತನದ ಪ್ರಮಾಣ ಶೇ 11ರಷ್ಟಿತ್ತು.
ಒಂಟಿತನ ಎನ್ನುವುದು ಯಾವಾಗಲೂ ಮಾತನಾಡಲು ಜನರು ಇಲ್ಲದೆ ಇರುವುದಲ್ಲ. ಬದಲಾಗಿ ಸ್ನೇಹಿತರ ವಲಯದಿಂದ ಹೊರಗುಳಿದಿರುವ ಅನುಭವ ಎಂದು ವರದಿ ಹೇಳಿದೆ.







