ಗುಡಿಬಂಡೆ | ಓವರ್‌ಲೋಡ್ ಟಿಪ್ಪರ್‌ನಿಂದ ಕಲ್ಲು ಬಿದ್ದು ಪೊಲೀಸ್ ಪೇದೆಗೆ ಗಾಯ

ಗುಡಿಬಂಡೆ : ಬೋಮ್ಮಗಾನಹಳ್ಳಿ ಕೆರೆಯ ಕಟ್ಟೆಯ ಮೇಲಿನ ರಸ್ತೆಯಲ್ಲಿ ವೇಗವಾಗಿ ಬಂದ ಟಿಪ್ಪರ್ ವಾಹನದಿಂದ ಬಿದ್ದ ದೊಡ್ಡ ಗಾತ್ರದ ಕಲ್ಲು ದ್ವಿಚಕ್ರ ವಾಹನ ಸವಾರಳ ಕಾಲಿಗೆ ಬಿದ್ದ ಪರಿಣಾಮ ಮಹಿಳಾ ಪೊಲೀಸ್ ಪೇದೆ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಬತ್ತಲಹಳ್ಳಿ ಗ್ರಾಮದ ಬಳಿ ಇರುವ ಜಲ್ಲಿ ಕ್ರಷರ್‌ನಿಂದ ಟಿಪ್ಪರ್‌ನಲ್ಲಿ ದೊಡ್ಡ ಗಾತ್ರದ ಕಲ್ಲುಗಳನ್ನು ತುಂಬಿಕೊಂಡು ಚಿಕ್ಕಬಳ್ಳಾಪುರದ ದಿಕ್ಕಿಗೆ ಹೋಗುತ್ತಿದ್ದ ವೇಳೆ, ಇದೇ ರಸ್ತೆಯಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ 27 ವರ್ಷದ ಮಹಿಳಾ ಪೋಲಿಸ್ ಪೇದೆ ಹಸೀನಾ ಅವರ ಕಾಲಿಗೆ ಕಲ್ಲು ಬಿದ್ದಿದೆ. ಗಾಯಗೊಂಡ ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ದ್ವಿಚಕ್ರವಾಹನವು ಸಂಪೂರ್ಣವಾಗಿ ಜಖಂಗೊಂಡಿದೆ.
ಈ ಭಾಗದಲ್ಲಿ ಟಿಪ್ಪರ್‌ಗಳು ನಿರಂತರವಾಗಿ ಓವರ್‌ಲೋಡ್ ಹೊತ್ತು ಅತಿವೇಗದಲ್ಲಿ ಸಂಚರಿಸುತ್ತಿದ್ದು, ಕಲ್ಲುಗಳು ರಸ್ತೆಮಧ್ಯೆ ಬೀಳುವ ಘಟನೆಗಳು ಆಗಾಗ ನಡೆಯುತ್ತಿವೆ. ಇದರಿಂದ ಸಾರ್ವಜನಿಕರಿಗೆ ಅನೇಕ ಬಾರಿ ಅಪಾಯ ಉಂಟಾಗಿದ್ದರೂ, ದೂರುಗಳ ಬಳಿಕವೂ ಯಾವುದೇ ಗಂಭೀರ ಕ್ರಮ ಕೈಗೊಳ್ಳಲಾಗಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈಗಾದರೂ ಸಂಬಂಧಪಟ್ಟ ಕ್ರಷರ್ ಮಾಲೀಕರ ವಿರುದ್ಧ ಹಾಗೂ ಟಿಪ್ಪರ್ ಚಾಲಕರ ವಿರುದ್ಧ ಕ್ರಮ ಕೈಗೊಂಡು, ಸಾರ್ವಜನಿಕರು ಸುರಕ್ಷಿತವಾಗಿ ಸಂಚರಿಸಲು ಕ್ರಮ ವಹಿಸಬೇಕು ಎಂಬುದು ಜನರ ಬೇಡಿಕೆ.







