ಚಿಕ್ಕಬಳ್ಳಾಪುರ: ಕೆರೆಯಲ್ಲಿ ಮುಳುಗಿ ಮೂವರು ಬಾಲಕರು ಮೃತ್ಯು

ಮೃತಪಟ್ಟ ವಿದ್ಯಾರ್ಥಿಗಳು
ಭಾಗ್ಯನಗರ(ಬಾಗೇಪಲ್ಲಿ): ತಾಲೂಕಿನ ಆಚೇಪಲ್ಲಿ ಗ್ರಾಮದ ಬೂರಗಮಡುಗು ರಸ್ತೆಯಲ್ಲಿರುವ ಹಳೇ ಕೆರೆಯಲ್ಲಿ ಆಚೇಪಲ್ಲಿ ಗ್ರಾಮದ ದಲಿತ ಕಾಲೋನಿಯ ಮೂವರು ಅಪ್ರಾಪ್ತ ವಿದ್ಯಾರ್ಥಿಗಳು ಈಜಲು ಹೋಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ
ಆಚೇಪಲ್ಲಿ ಗ್ರಾಮದ ನಾಗರಾಜು ಮತ್ತು ನಾರಾಯಣಮ್ಮ ಎಂಬುವರ ಪುತ್ರ ಹರ್ಷವರ್ದನ್(17), ಈಶ್ವರಪ್ಪ ಲಕ್ಷ್ಮಿನರಸಮ್ಮ ಎಂಬವರ ಪುತ್ರ ವಿಷ್ಣುವರ್ದನ್(12), ಗಂಗರಾಜು ಲಕ್ಷ್ಮಿ ಎಂಬವರ ಪುತ್ರ ನಿಹಾಲ್ ರಾಜ್(10) ಅವರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಬಾಲಕರು. ಹರ್ಷವರ್ದನ್ ಬಾಗೇಪಲ್ಲಿ ಪಟ್ಟಣದ ಜಡಲ ಬೈರವೇಶ್ವರಸ್ವಾಮಿ ರಸ್ತೆಯಲ್ಲಿರುವ ವಿವೇಕಾನಂದ ಪಿಯು ಕಾಲೇಜಿಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ವಿಷ್ಣುವರ್ದನ್ ಆಚೇಪಲ್ಲಿ ಕ್ರಾಸ್ನಲ್ಲಿ ಸರಕಾರಿ ಹಿರಿಯ ಪ್ರೌಡಶಾಲೆಯಲ್ಲಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ,ನಿಹಾಲ್ ರಾಜ್ ಅಚೇಪಲ್ಲಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಈ ಮೂವರು ವಿದ್ಯಾರ್ಥಿಗಳು ಶಾಲೆಗಳಿಗೆ ದಸರಾ ರಜೆ ಇದ್ದ ಕಾರಣ ಬೂರಗಮಡುಗು ರಸ್ತೆಯಲ್ಲಿರುವ ಹಳೇ ಕೆರೆಯಲ್ಲಿ ಈಜಲು ಹೋಗಿದ್ದರು. ಈಜಲು ಬಾರದ ವಿಷ್ಣುವರ್ದನ್, ನಿಹಾಲ್ ರಾಜ್ ನೀರಿನಲ್ಲಿ ಮುಳುಗುತ್ತಿದ್ದಾಗ ರಕ್ಷಣೆ ಮಾಡಲು ಹೋಗಿ ಹರ್ಷವರ್ದನ್ ಕೂಡ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಮೂವರು ವಿದ್ಯಾರ್ಥಿಗಳ ಮೃತದೇಹಗಳು ಒಂದೇ ಸ್ಥಳದಲ್ಲಿ ಪತ್ತೆಯಾಗಿದೆ.
ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದಾರೆ.
ಸಾರ್ವಜನಿಕರ ಆಸ್ಪತ್ರೆಗೆ ಶಾಸಕ ಸುಬ್ಬಾರೆಡ್ಡಿ ಬೇಟಿ:
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಆಸ್ಪತ್ರೆಗೆ ಬೇಟಿ ಮೃತರ ಕುಟುಂಬಗಳಿಗೆ ಸ್ವಾಂತನ ಹೇಳಿದರು.
ಆಚೇಪಲ್ಲಿ ಗ್ರಾಮದ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವುದು ಅತ್ಯಂತ ವಿಷಾದನೀಯ ಈ ಘಟನೆ ನಡೆಯಬಾರದಿತ್ತು. ಹೆತ್ತವರು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಕೆರೆ ಕುಂಟೆಗಳ ಕಡೆ ಹೋಗದ ಹಾಗೆ ನಿಗಾ ವಹಿಸಬೇಕು. ಈ ಮೂವರು ಬಾಲಕರ ಕುಟುಂಬದವರೊಂದಿಗೆ ನಾನಿದ್ದೇನೆ ಎಂದು ಹೇಳಿದರು.







