ಲಿಂಗ ಪರಿವರ್ತನೆ ಸಮರದಲ್ಲಿ ಗೆದ್ದ ಮಹಾರಾಷ್ಟ್ರ ಪೊಲೀಸ್ ಕಾನ್ಸ್ಟೇಬಲ್, ಈಗ ತಂದೆ!
Photo : hindustantimes.com
ಮುಂಬೈ: ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅನುಮತಿ ಕೋರಿ ಐದು ವರ್ಷ ಹಿಂದೆ ಮುಂಬೈ ಹೈಕೋರ್ಟ್ಗೆ ಮೊರೆ ಹೋಗಿದ್ದ ಬೀಡ್ ಜಿಲ್ಲೆಯ ಪೊಲೀಸ್ ಲಲಿತ್ ಸಾಳ್ವೆ ಪತ್ನಿ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ.
ನ್ಯಾಯಾಲಯದ ಹೋರಾಟದ ಬಳಿಕ 2018ರಲ್ಲಿ ಸಾಳ್ವೆ, ಸಿಎಸ್ಟಿ ಬಳಿಯ ಸರ್ಕಾರಿ ಸ್ವಾಮ್ಯದ ಸೆಂಟ್ ಜಾರ್ಜ್ ಆಸ್ಪತ್ರೆಯ ವೈದ್ಯರನ್ನು ಭೇಟಿ ಮಾಡಿ ಸರಣಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಸಾಳ್ವೆ ಜನ್ಮಜಾತವಾಗಿ ಪುರುಷ ಎನ್ನುವುದು ಸಾಬೀತಾದ ಸಂಭ್ರಮದಲ್ಲಿದ್ದಾರೆ.
"ಈತ ಹುಟ್ಟಿನಿಂದ ಪುರುಷ ಎನ್ನುವುದನ್ನು ಕೇಳಿ ಆನಂದಬಾಷ್ಪ ಸುರಿಸಿದ್ದು ನನಗೆ ಇನ್ನೂ ನೆನಪಿದೆ" ಎಂದು ಸಾಳ್ವೆಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ ಪ್ಲಾಸ್ಟಿಕ್ ಸರ್ಜನ್ ಡಾ.ರಜತ್ ಕಾಪುರ್ ಹೇಳಿದ್ದಾರೆ. ಸಾಳ್ವೆಗೆ ಕೇವಲ ಜನನಾಂಗ ಪುನಶ್ಚೇತನ ಶಸ್ತ್ರಚಿಕಿತ್ಸೆ ಮಾತ್ರ ಆಗಬೇಕಿತ್ತು. "ಇವರ ಜನನಾಂಗದ ಒಂದು ಭಾಗ ಸಮರ್ಪಕವಾಗಿ ಬೆಳೆದಿರಲಿಲ್ಲ" ಎಂದು ಕಾಪುರ್ ವಿವರಿಸಿದ್ದಾರೆ.
ಶಸ್ತ್ರಚಿಕಿತ್ಸೆ ಪೂರ್ಣಗೊಂಡ ಬಳಿಕ ಸಾಳ್ವೆ ಸಹಜ ಲೈಂಗಿಕ ಕ್ರಿಯೆ ನಡೆಸಬಹುದು ಎನ್ನುವ ನಂಬಿಕೆ ವೈದ್ಯಕೀಯ ತಂಡಕ್ಕೆ ಇತ್ತು. ಆದ್ದರಿಂದ ಆತನಿಗೆ ಮಗು ಆಗಿರುವುದು ಅಚ್ಚರಿಯೇನೂ ಅಲ್ಲ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾದವರು ಸಂತಾನಶಕ್ತಿ ಹೊಂದಿರುವುದಿಲ್ಲ.
ಶನಿವಾರ ಕರ್ತವ್ಯಕ್ಕೆ ತೆರಳುವ ಮುನ್ನ ಸಾಳ್ವೆ ತನ್ನ ಮಗುವಿಗೆ ಲಸಿಕೆ ಹಾಕಿಸಲು ತೆರಳಿದ್ದರು. ಜನವರಿ 15ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿ ಗಂಡುಮಗುವಿಗೆ ಜನ್ಮನೀಡಿದ್ದ ಪತ್ನಿ ಸೀಮಾ, ಮನೆಗೆ ಮರಳಿದ್ದಾರೆ. "ಈ ಕ್ಷಣ ನಮಗೆ ಅತೀವ ಆನಂದವಾಗುತ್ತಿದೆ" ಎಂದು ಸಾಳ್ವೆ ಹೇಳಿದರು. ಇವರನ್ನು ಕುಟುಂಬದಲ್ಲಿ ಹೆಣ್ಣುಮಗು ಎಂದೇ ಬೆಳೆಸಲಾಗಿತ್ತು ಹಾಗೂ ಬಾಲ್ಯದಲ್ಲೇ ಅವರ ವೃಷಣದ ಒಂದು ಭಾಗವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು. ಆದರೆ ಹುಡುಗಿಯಾಗಿ ಸದಾ ಕಿರಿಕಿರಿ ಎನಿಸುತ್ತಿತ್ತು ಹಾಗೂ 30 ವರ್ಷ ಕಳೆದ ಬಳಿಕ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ನಿರ್ಧರಿಸಿದ್ದಾಗಿ ಅವರು ವಿವರಿಸಿದರು.
ಮಗುವನ್ನು ಉತ್ತಮವಾಗಿ ಬೆಳೆಸಬೇಕು ಮತ್ತು ಮೌಲ್ಯಗಳನ್ನು ತುಂಬಬೇಕು. ಆತನಿಗೆ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗುವ ಅವಕಾಶ ಕಲ್ಪಿಸಿಕೊಡಬೇಕು ಎನ್ನುವುದು ತಮ್ಮ ಆಶಯ ಎಂದು ಅವರು ಹೇಳಿದರು.