ಸಾಬರಮತಿಯ ಮಹಾನ್ ಸಂತ ಮಹಾತ್ಮಾ ಗಾಂಧಿಯ ವಿಜಯಪುರ ಭೇಟಿ

ವಿಜಯಪುರ: ಮಹಾತ್ಮಾ ಗಾಂಧಿ ಹಾಗೂ ಟಿಪ್ಪು ಸುಲ್ತಾನ್ ಬ್ರಿಟಿಷರನ್ನು ಅತ್ಯಂತ ಭಯ ಪಡುವಂತೆ ಮಾಡಿದ ಇಬ್ಬರು ಮಹಾ ನಾಯಕರಾಗಿದ್ದಾರೆ. ಬ್ರಿಟಿಷರು ಮಹಾತ್ಮಾ ಗಾಂಧೀಜಿಯ ಅಹಿಂಸಾತ್ಮಕ ಹೋರಾಟಕ್ಕೆ ಹೆದರಿದರೆ, ಟಿಪ್ಪುಸುಲ್ತಾನರ ಖಡ್ಗಕ್ಕೆ ಹೆದರುತ್ತಿದ್ದರು ಎಂಬ ಮಾತಿದೆ.
ಅಂತಹ ಮಹಾನ್ ನಾಯಕ ಮಹಾತ್ಮಾ ಗಾಂಧೀಜಿ, ಸಾಬರಮತಿಯ ಮಹಾನ್ ಸಂತ ಮಹಾತ್ಮ ಗಾಂಧಿ ಅವರು ವಿಜಯಪುರಕ್ಕೆ ನಾಲ್ಕು ಬಾರಿ ಭೇಟಿ ನೀಡಿ ಇಲ್ಲಿನ ಐತಿಹಾಸಿಕ ಸ್ಮಾರಕ ಗೋಳಗುಮ್ಮಟ ವೀಕ್ಷಿಸಿದ್ದರು.
ಈ ಭಾಗದ ಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು. ವಿಜಯಪುರ ಐತಿಹಾಸಿಕ ಗೋಳಗುಮ್ಮಟ ವೀಕ್ಷಣೆ ಮಾಡಿ, ಇಲ್ಲಿನ ಪಿಸುಗುಟ್ಟುವ ಗ್ಯಾಲರಿಯ ಅದ್ಭುತ ತಂತ್ರಜ್ಞಾನ ಕಂಡು ಸಂತೋಷ ವ್ಯಕ್ತಪಡಿಸಿದ್ದರು.
ಪಿತಾಮಹ ಮಹಾತ್ಮಾ ಗಾಂಧಿಯವರು 1918ರ ಮೇ 5, 6ರಂದು ಮೊದಲ ಬಾರಿಗೆ ವಿಜಯಪುರದಲ್ಲಿ ನಡೆದ ಐತಿಹಾಸಿಕ 17ನೆ ಕಾಂಗ್ರೆಸ್ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿ ಎರಡು ದಿನ ಇಲ್ಲೇ ತಂಗಿದ್ದರು. ಹಿರಿಯ ಸ್ವಾತಂತ್ರ್ಯ ಯೋಧ ದಿ. ಕೌಜಲಗಿ ಶ್ರೀನಿವಾಸರಾಯರು ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲರ ಸಹೋದರ ವಿಠಲಬಾಯಿ ಪಟೇಲ ಈ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಗಾನಕೋಗಿಲೆ ಎಂದು ಹೆಸರಾಗಿದ್ದ ಸರೋಜಿನಿ ದೇವಿ ನಾಯ್ಡು ಕೂಡ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ದಿ.ಕೌಜಲಗಿ ಅವರ ಮನೆಯಲ್ಲಿ ತಂಗಿದ್ದರು.
ಈ ಸಮಾವೇಶದಲ್ಲಿ ಗಾಂಧಿ ನೇತೃತ್ವದಲ್ಲಿ ಹಲವು ನಿರ್ಣಯ ಮಂಡನೆಯಾಗಿದ್ದವು. ಭಾರತೀಯ ಸೈನಿಕರ ತರಬೇತಿಗಾಗಿ ಪ್ರತ್ಯೇಕ ಸೈನಿಕ ಶಾಲೆ ಆರಂಭಿಸಬೇಕು, ಬ್ರಿಟಿಷರ ಸರಕಾರದ ಉನ್ನತ ಹುದ್ದೆಗಳು ಭರ್ತಿಗೊಳಿಸುವಾಗ ವರ್ಣಭೇದವಿಲ್ಲದೆ ಭಾರತೀಯರಿಗೂ ಸಮಾನ ಅವಕಾಶ ನೀಡುವ ಮಹತ್ತರ ನಿರ್ಣಯ ಇದೇ ಸಂದರ್ಭದಲ್ಲಿ ಮಂಡಿಸಿದ್ದರು.
ನಂತರ 1921ರ ಮೇ 28ರಂದು ಸ್ವಾತಂತ್ರ್ಯ ಚಳವಳಿ ಹಾಗೂ ಬಾಲ ಗಂಗಾಧರ ತಿಲಕ್ ಎಂಬ ಹೆಸರಿನಲ್ಲಿ ನಿಧಿ ಸಂಗ್ರಹಿಸುವ ಸಮಯದಲ್ಲಿ ವಿಜಯಪುರಕ್ಕೆ ಗಾಂಧೀಜಿ ಎರಡನೇ ಬಾರಿಗೆ ಭೇಟಿ ನೀಡಿದ್ದರು. ಆಗ ನಗರದ ಐತಿಹಾಸಿಕ ತಾಜ್ ಬಾವಡಿಯ ಬಳಿ ಸುಮಾರು 10,000 ಜನರು ಸೇರಿದ್ದರು. ಈ ಸಮಯದಲ್ಲಿ ಕೆ.ಹನುಮಂತರಾಯ, ಕಾರ್ನಾಡ್ ಸದಾಶಿವ ರಾವ್, ಆರ್.ಆರ್ ದಿವಾಕರ, ಸಂಸದ ನಕ್ಕರ್ಣಿ ಮತ್ತು ಕರ್ನಾಟಕದ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಪಾಲ್ಗೊಂಡಿದ್ದರು.
ಗಾಂಧೀಜಿ 1927 ಫೆ. 19ರಂದು ಖಾದಿ ಪ್ರಚಾರ ಸಮಯದಲ್ಲಿ ವಿಜಯಪುರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಹುಬ್ಬಳ್ಳಿಯಿಂದ ಸೋಲಾಪುರಕ್ಕೆ ತೆರೆದ ವಾಹನದ ಮೂಲಕ ಸಂಚಾರ ನಡೆಸಿದ್ದರು. ಬಾಗಲಕೋಟೆಯಿಂದ ವಿಜಯಪುರಕ್ಕೆ ಬರುವ ಸಮಯದಲ್ಲಿ ಕೊಲಾರದಲ್ಲಿ ಒಂದು ಘಟನೆ ನಡೆಯಿತು. ಕಲ್ಲಿನ ಗಣಿಗಾರಿಕೆ ಕೇಂದ್ರದಲ್ಲಿ ಮಹಿಳೆಯೊಬ್ಬಳು ಬಿಸಿಲಿನಲ್ಲಿ ಜಲ್ಲಿ ಕೆಲಸ ಮಾಡುವುದನ್ನು ಕಂಡು ಗಾಂಧೀಜಿ ವಾಹನ ನಿಲ್ಲಿಸಿ, ಆ ಮಹಿಳೆಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಆಕೆಯ ಕಠಿಣ ಕೆಲಸ ಕಂಡು ತುಂಬಾ ದುಃಖಿತರಾದರು. ಮಹಿಳೆಯರು ಸ್ವತಂತ್ರ ಜೀವನ ನಡೆಸಲು ಅವರಿಗೆ ಚರಕ ನೀಡಬೇಕೆಂಬ ಕಲ್ಪನೆಯನ್ನು ಗಾಂಧೀಜಿ ವ್ಯಕ್ತಪಡಿಸಿದರು. ಇದೇ ಮುಂದೆ ಖಾದಿ ಗ್ರಾಮೋದ್ಯೋಗ ಕೈಗೊಳ್ಳಲು ಪ್ರೇರಣೆಯಾಗುತ್ತದೆ. 1934 ಮಾರ್ಚ್ 8ರಂದು ಗಾಂಧೀಜಿಯವರು ಅಸ್ಪಶ್ಯತೆ ನಿರ್ಮೂಲನೆ ಚಳವಳಿ ಸಂದರ್ಭದಲ್ಲಿ ವಿಜಯಪುರಕ್ಕೆ ಮತ್ತೊಮ್ಮೆ ಭೇಟಿ ನೀಡಿದ್ದರು. ಅದು ಅವರ ಕೊನೆಯ ಭೇಟಿಯಾಗಿತ್ತು.







