ಮದ್ದೂರಿನಲ್ಲಿ ಸೌಹಾರ್ದ-ಸಾಮರಸ್ಯ ನಡಿಗೆ ಯಶಸ್ವಿ

ಮಂಡ್ಯ : ಪೊಲೀಸರ ಅನುಮತಿ ನಿರಾಕರಣೆ ನಡುವೆಯೂ ಜನಪರ ಸಂಘಟನೆಗಳು ಸೋಮವಾರ ಮದ್ದೂರು ಪಟ್ಟಣದಲ್ಲಿ ಆಯೋಜಿಸಿದ್ದ ಸೌಹಾರ್ದ-ಸಾಮರಸ್ಯ ನಡಿಗೆ ಮೂಲಕ ಜಿಲ್ಲೆಯಲ್ಲಿ ಕೋಮುವಾದಿ ಶಕ್ತಿಗಳಿಗೆ ಎಚ್ಚರಿಕೆಯನ್ನು ರವಾನಿಸಿದವು.
ಗಣೇಶಮೂರ್ತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಸಂಬಂಧ ಮದ್ದೂರು ಪಟ್ಟಣದಲ್ಲಿ ಉದ್ಭವಿಸಿದ್ದ ಗಲಭೆ, ಕೋಮು ಗಲಭೆ ರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಜನಪರ ಸಂಘಟನೆಗಳು ಸೌಹಾರ್ದತೆ ಮತ್ತು ಸಾಮರಸ್ಯ ಮೂಡಿಸಲು ಈ ನಡಿಗೆಯನ್ನು ಆಯೋಜಿಸಿದ್ದವು.
ಮತ್ತೆ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ ಎಂಬ ನೆಪದಿಂದ ಪೊಲೀಸರು ನಡಿಗೆ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರು. ಆದರೆ, ಸಂಘಟನೆಗಳ ಕಾರ್ಯಕರ್ತರು ಸಾಂಕೇತಿಕವಾಗಿ ನಡಿಗೆ ನಡೆಸುವ ಮೂಲಕ ಜಿಲ್ಲಾಡಳಿತಕ್ಕೆ ಸೆೆಡ್ಡು ಹೊಡೆದರು.
ಮಳವಳ್ಳಿ ರಸ್ತೆಯ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪ್ರತಿಮೆಯಿಂದ ಶಿವಪುರ ಧ್ವಜಸತ್ಯಾಗ್ರಹ ಸೌಧದವರೆಗೆ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಪೊಲೀಸರ ನಿರ್ಬಂಧದ ಕಾರಣ ಪ್ರತಿಮೆ ಆವರಣದಲ್ಲೇ ಸುತ್ತುಹಾಕಿ ಸೌಹಾರ್ದ-ಸಾಮರಸ್ಯ ಸಂದೇಶ ರವಾನಿಸಲಾಯಿತು. ರೈತ, ದಲಿತ, ಮಹಿಳಾ ಸೇರಿದಂತೆ ಹಲವು ಜನಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಹಾಗೂ ನಾಡಿನ ಸಾಹಿತಿ, ಚಿಂತಕರು ಈ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ನೆಲದ ಸೌಹಾರ್ದತೆ ಕದಡಲು ಬಿಡುವುದಿಲ್ಲ ಎಂದು ಸಾರಿದರು.
ಜಿಲ್ಲೆಯಾದ್ಯಂತ ಮುಂದಿನ ದಿನಗಳಲ್ಲಿ ಶಾಂತಿ, ಸಹಬಾಳ್ವೆ, ಸೌಹಾರ್ದತೆಯ ಸಂದೇಶ ಸಾರುವ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ ಎಂದು ಕಾರ್ಯಕ್ರಮ ಆಯೋಜಕರು ಘೋಷಿಸಿದರು.
ಚಿಂತಕರಾದ ಭೂಮಿಗೌಡ, ಪ್ರೊ.ಹುಲ್ಕೆರೆ ಮಹದೇವ, ಪ್ರೊ.ಚಂದ್ರಶೇಖರನ್, ಎಂ.ಸಿ.ಬಸವರಾಜು, ಮಳವಳ್ಳಿ ಕೃಷ್ಣ, ಲೇಖಕ ರಾಜೇಂದ್ರ ಪ್ರಸಾದ್, ಶ್ರೀರಂಗಪಟ್ಟಣದ ಮುಸ್ಲಿಮ್ ಸೌಹಾರ್ದ ಒಕ್ಕೂಟದ ಪ್ರೊ.ಇಲ್ಯಾಸ್ ಅಹ್ಮದ್, ಸೌಹಾರ್ದ ಕರ್ನಾಟಕದ ರಾಜಶೇಖರಮೂರ್ತಿ, ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಬೋರಾಪುರ ಶಂಕರೇಗೌಡ, ಉಮೇಶ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ತಿಮ್ಮೇಗೌಡ, ಎನ್.ಎಲ್.ಭರತ್‌ರಾಜ್, ಬಿ.ಹನುಮೇಶ್, ಜಿ.ರಾಮಕೃಷ್ಣ, ಟಿ.ಯಶ್ವಂತ್, ಚಿಕ್ಕರಸಿನಕೆರೆ ಶಿವಲಿಂಗಯ್ಯ, ತಾಲೂಕು ಅಧ್ಯಕ್ಷ ಡಿ.ಸಿ.ಮಹೇಂದ್ರ, ಜನವಾದಿ ಸಂಘಟನೆಯ ದೇವಿ, ಸುನಿತಾ, ಡಿ.ಕೆ.ಲತಾ, ಶೋಭ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿ.ಕುಮಾರಿ, ಜನಶಕ್ತಿ ಸಂಘಟನೆಯ ಸಿದ್ದರಾಜು, ನಗರಕೆರೆ ಜಗದೀಶ್, ಬಿ.ಕೃಷ್ಣಪ್ರಕಾಶ್, ಮಹಿಳಾ ಮುನ್ನಡೆಯ ಶಿಲ್ಪ, ಅಂಜಲಿ, ದಸಂಸದ ಶಿವರಾಜು ಮರಳಿಗ, ಅಂದಾನಿ ಸೋಮನಹಳ್ಳಿ, ಎಂ.ವಿ.ಕೃಷ್ಣ, ಹುರುಗಲವಾಡಿ ರಾಮಯ್ಯ, ಇತರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಮದ್ದೂರಿನ ಪ್ರಕರಣವನ್ನು ರಾಜಕೀಯ ಸ್ವಾರ್ಥಕ್ಕೋಸ್ಕರ ಸಾಮರಸ್ಯವನ್ನು ಕದಡುವ ಯತ್ನ ನಡೆಸಲಾಗಿತ್ತು. ಜಿಲ್ಲೆಯ ಜನತೆ ಎಂದಿನಂತೆ ಅನ್ಯೋನ್ಯತೆಯಿಂದ ನಡೆದುಕೊಂಡು ಹೋಗಬೇಕು ಎಂಬುದನ್ನು ತಿಳಿಸಲು ಈ ನಡಿಗೆ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಪೊಲೀಸರು ನಿರಾಕರಿಸಿದ್ದು ಬೇಸರ ತಂದಿದೆ. ಆದರೆ, ನಮ್ಮ ಉದ್ದೇಶ ಈಡೇರಿದೆ. ಇಲ್ಲಿ ಭಾಗವಹಿಸಿರುವ ಒಬ್ಬೊಬ್ಬರೂ ನೂರುಮಂದಿಗೆ ಸಮಾನ. ಕೋಮುವಾದಿ ಶಕ್ತಿಗಳಿಗೆ ಅವಕಾಶ ಇರುವುದಿಲ್ಲ ಎಂಬ ಸಂದೇಶ ಕೊಟ್ಟಿದ್ದೇವೆ.
-ಎಂ.ಸಿ.ಬಸವರಾಜು, ಪುರಸಭೆ ಮಾಜಿ ಅಧ್ಯಕ್ಷ, ಮದ್ದೂರು
ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರೆ ಮದ್ದೂರಿನ ಘಟನೆ ನಡೆಯುತ್ತಿರಲಿಲ್ಲ. ಮಂಡ್ಯ ಕೋಮುಸೌಹಾರ್ದಕ್ಕೆ ಮಾದರಿಯಾದ ಜಿಲ್ಲೆ. ಈ ಜಿಲ್ಲೆಯ ಪ್ರತಿಯೊಬ್ಬರ ಎದೆಯಲ್ಲಿ ತಾಯಿಯ ಅಂತಃಕರಣ ಜೀವಂತವಾಗಿದೆ. ಇಂತಹ ನೆಲದಲ್ಲಿ ಬಿಜೆಪಿ, ಆರೆಸ್ಸೆಸ್‌ನವರು ತಮ್ಮ ರಾಜಕೀಯ ನೆಲೆ ಕಂಡುಕೊಳ್ಳುವ ಯತ್ನವಾಗಿ ಜನರಲ್ಲಿ ಕೋಮುಭಾವ ಬಿತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ಇದು ಫಲಿಸುವುದಿಲ್ಲ.
-ಪ್ರೊ.ಹುಲ್ಕೆರೆ ಮಹದೇವ, ಚಿಂತಕರು.
ನಲ್ವತ್ತು ವರ್ಷದಿಂದ ಬಸವಣ್ಣ, ಗಾಂಧೀಜಿ, ಕುವೆಂಪು ಮಾರ್ಗದಲ್ಲಿ ಜಿಲ್ಲೆಯಲ್ಲಿ ಶಾಂತಿಯುತ ಹೋರಾಟ ನಡೆಸಿದ್ದೇವೆ. ಇಂದಿನದೂ ಅದೇ ರೀತಿಯ ಹೋರಾಟ. ಆದರೆ, ಪ್ರಚೋದನೆ ನೀಡುವ ಸಿ.ಟಿ.ರವಿ, ಯತ್ನಾಳ್ ಅಂತಹವರಿಗೆ ಅವಕಾಶ ನೀಡಿ, ನಮಗೆ ನಿರಾಕರಿಸಿದ್ದು ಸರಿಯಲ್ಲ. ಯಡಿಯೂರಪ್ಪ, ಕುಮಾರಸ್ವಾಮಿಯಂತಹವರು ರಾಜಕಾರಣಕ್ಕೋಸ್ಕರ ರೈತಸಂಘದ ಹಸಿರುವ ಟವಲ್ ಹಾಕಿಕೊಂಡು ಮಸಿ ಬಳಿಯು ಕೆಲಸ ಮಾಡಿದ್ದಾರೆ. ಕೋಮುವಾದಿಗಳ ಜತೆಗೆ ಕೈಜೋಡಿಸುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಜಾತ್ಯತೀತ ತತ್ವದ ಪಕ್ಷಕ್ಕೆ ತಿಲಾಂಜಲಿ ಇಟ್ಟಿದ್ದಾರೆ.
-ಎ.ಎಲ್.ಕೆಂಪೂಗೌಡ, ರೈತಸಂಘದ ಜಿಲ್ಲಾಧ್ಯಕ್ಷ.







