ಸಾಹಿತ್ಯ ಸಮ್ಮೇಳನದಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪ: ತನಿಖೆಗೆ ಒತ್ತಾಯಿಸಿ ಲೋಕಾಯುಕ್ತಕ್ಕೆ ದೂರು

ಮಂಡ್ಯ : ಜಿಲ್ಲೆಯಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ದತೆ ಹಾಗೂ ನಿರ್ವಹಣೆಯ ಮೂಲಕ ಬಹುಕೋಟಿ ರೂ.ಹಗರಣ ಮಾಡಲಾಗಿದೆ ಎಂದು ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಆರೋಪಿಸಿದ್ದು, ತನಿಖೆಗೆ ಒತ್ತಾಯಿಸಿ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಈ ಸಂಬಂಧ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಡಿಸೆಂಬರ್ 19ರಿಂದ ನಡೆದ ಮೂರು ದಿನಗಳ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆಪದಲ್ಲಿ ಕಸಾಪ ರಾಜ್ಯಾಧ್ಯಕ್ಷ, ಜಿಲ್ಲೆಯ ಅಧಿಕಾರಿಗಳು ಹಾಗೂ ಕರ್ನಾಟಕ ಸ್ಟೇಟ್ಸ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಆಂಡ್ ಅಡ್ವರ್ಟೈಸ್ ಸಂಸ್ಥೆಯು ಭಾರೀ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿದರು. ಎಲ್ಲ ವಿಭಾಗಗಳಲ್ಲೂ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಲೋಕಾಯುಕ್ತ ಸಂಸ್ಥೆಗೆ ದೂರು ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಕ್ಷನ್ 70 ಅಡಿಯಲ್ಲಿ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ಎಚ್. ಡಿ.ಜಯರಾಂ, ಪದಾಧಿಕಾರಿಗಳಾದ ಶಿವರಾಮೇಗೌಡ, ಮನು, ಮುದ್ದೇಗೌಡ ಹಾಗೂ ಆಟೊ ವೆಂಕಟೇಶ್ ಉಪಸ್ಥಿತರಿದ್ದರು.





