ಲೈಂಗಿಕ ದೌರ್ಜನ್ಯದ ವಿರುದ್ಧ ಆಂತರಿಕ ದೂರು ಸಮಿತಿ ರಚಿಸಲು ಒತ್ತಾಯ : ದುಡಿಯುವ ಮಹಿಳೆಯರ 9ನೇ ರಾಜ್ಯ ಸಮಾವೇಶದಲ್ಲಿ ನಿರ್ಣಯ

ಮಂಡ್ಯ : ಎಲ್ಲ ಕಚೇರಿ ಮತ್ತು ವಲಯಗಳಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ದ ಆಂತರಿಕ ದೂರು ಸಮಿತಿಗಳನ್ನು ರಚಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರವಿವಾರ ನಗರದ ಎಸ್.ಬಿ.ಸಮುದಾಯ ಭವನದಲ್ಲಿ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ(ಸಿಐಟಿಯು) ವತಿಯಿಂದ ನಡೆದ ದುಡಿಯುವ ಮಹಿಳೆಯರ 9ನೇ ರಾಜ್ಯ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಇತರ ನಿರ್ಣಯಗಳು: ಕೆಲಸದ ಸ್ಥಳಗಳಲ್ಲಿ ದುಡಿಯುವ ಮಹಿಳೆಯರಿಗೆ ಯಾವುದೇ ತಾರತಮ್ಯವಿಲ್ಲದೇ ಹೆರಿಗೆ ಭತ್ತೆ ಜಾರಿ ಮಾಡಬೇಕು. ಗುತ್ತಿಗೆ, ಹೊರ ಗುತ್ತಿಗೆ, ಗೌರವಧನ, ಪ್ರೋತ್ಸಾಹಧನ, ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರಿಗೂ ಹೆರಿಗೆ ಸೌಲಭ್ಯ ನೀಡಬೇಕು. ಹೆರಿಗೆ ಸೌಲಭ್ಯ ನೀಡದ ಗುತ್ತಿಗೆದಾರರ ಲೈಸೆನ್ಸ್ ರದ್ದುಗೊಳಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು.
ಮಹಿಳೆಯರು ದುಡಿಯುವ ಸ್ಥಳಗಳಲ್ಲಿ ಪ್ರತ್ಯೇಕ ಶೌಚಾಲಯಗಳನ್ನು ಕಟ್ಟಬೇಕು ಮತ್ತು ಸ್ವಚ್ಛವಾಗಿಡಬೇಕು. ಸಾರ್ವಜನಿಕ ಶೌಚಾಲಯಗಳಲ್ಲಿ ಪುರುಷರಿಗೆ ಉಚಿತ ಪ್ರವೇಶದ ಹಾಗೇ ಮಹಿಳೆಯರಿಗೂ ಉಚಿತ ಪ್ರವೇಶ ಕೊಡಬೇಕು ಮತ್ತು ಸ್ವಚ್ಛತೆಯನ್ನು ಖಾತ್ರಿಪಡಿಸಬೇಕು.
ತಿಂಗಳಿಗೆ ಒಂದು ಮುಟ್ಟಿನ ರಜೆಯನ್ನು ಕೊಡಬೇಕು. ಯಾವುದೇ ತಾರತಮ್ಯವಿಲ್ಲದೇ ವರ್ಗಾವಣೆ ಮತ್ತು ಮುಂಬಡ್ತಿಗಳನ್ನು ಕೊಡಬೇಕು. ಕೇಂದ್ರ ಸರಕಾರ ತಂದಿರುವ 4 ಸಂಹಿತೆಗಳನ್ನುಕರ್ನಾಟಕ ಸರಕಾರ ರದ್ದುಗೊಳಿಸಬೇಕು. ರಾತ್ರಿ ಪಾಳಿ ಕಡ್ಡಾಯ ಮಾಡಬಾರದು. ಕೆಲಸದ ಸಮಯವನ್ನು 8-12 ಗಂಟೆಗೆ ಹೆಚ್ಚಿಸಬಾರದು.
ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಎ.ಆರ್. ಸಿಂಧು, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ, ಮಾಲಿನಿ, ಉಪಾಧ್ಯಕ್ಷೆ ಸಿ.ಕುಮಾರಿ, ಮಾಲಿನಿ ಮೇಸ್ತಾ, ಬಾಲಾಜಿರಾವ್, ಇತರರ ಮುಖಂಡರು ಸಮಾವೇಶದಲ್ಲಿ ಮಾತನಾಡಿದರು.







