ಮಂಡ್ಯ: ರಸ್ತೆ ಪಕ್ಕ ಉರುಳಿದ ಸಾರಿಗೆ ಬಸ್; 30 ಮಂದಿಗೆ ಗಾಯ

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ ರಸ್ತೆ ಪಕ್ಕ ಉರುಳಿ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಹಾಡ್ಯ ಗ್ರಾಮದ ಬಳಿ ಶನಿವಾರ ಸಂಜೆ ನಡೆದಿದೆ.
ತಕ್ಷಣ ಪೊಲೀಸರು, ಸಾರ್ವಜನಿಕರ ಸಹಕಾದೊಂದಿಗೆ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಐದಾರು ಮಂದಿಗೆ ಮಾತ್ರ ಹೆಚ್ಚಿನ ಗಾಯವಾಗಿದ್ದು, ಉಳಿದವರೆಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಮಂಡ್ಯದಿಂದ ಶಿವಳ್ಳಿ, ಸುಂಕಾತೊಣ್ಣೂರು ಮಾರ್ಗವಾಗಿ ಪಾಂಡವಪುರಕ್ಕೆ ತೆರಳುತ್ತಿತ್ತು. ಈ ವೇಳೆ ಎದುರಿನಿಂದ ವಾಹನಕ್ಕೆ ಜಾಗ ಬಿಡಲು ಪಕ್ಕಕ್ಕೆ ಚಲಿಸಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಸಂಬಂಧ ಶಿವಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story