ಕೇಂದ್ರದಿಂದ ಮೈಷುಗರ್ ಕಾರ್ಖಾನೆಗೆ 500 ಕೋಟಿ ರೂ. ಅನುದಾನ ಕೊಡಿಸಲಿ; ಎಚ್ಡಿಕೆಗೆ ಚಲುವರಾಯಸ್ವಾಮಿ ಸವಾಲು

ಎನ್.ಚಲುವರಾಯಸ್ವಾಮಿ
ಮಂಡ್ಯ : ಸರಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆಯಾದ ಮೈಸೂರು ಸಕ್ಕರೆ ಕಾರ್ಖಾನೆ(ಮೈಷುಗರ್)ಗೆ ಕೇಂದ್ರ ಸರಕಾರದಿಂದ 500 ಕೋಟಿ ರೂ. ವಿಶೇಷ ಅನುದಾನ ಕೊಡಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.
ರವಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಮ್ಮ ಸರಕಾರ 50 ಕೋಟಿ ರೂ. ಅನುದಾನ ನೀಡಿ ಕಾರ್ಖಾನೆ ನಡೆಯುವಂತೆ ಮಾಡಿದೆ. ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕೇಂದ್ರದಿಂದ ಕಾರ್ಖಾನೆಗೆ ಮತ್ತಷ್ಟು ಅನದಾನ ಕೊಡಿಸಲಿ ಎಂದು ಸವಾಲು ಹಾಕಿದರು.
ಜಿಲ್ಲೆಯ ಅಭಿವೃದ್ಧಿಗೆ ಕುಮಾರಸ್ವಾಮಿ ಅವರಿಂದ ಯಾವುದೇ ಕೊಡುಗೆ ಇಲ್ಲ. ಈಗ ಕೇಂದ್ರ ಸಚಿವರಾಗಿದ್ದು, ಅಭಿವೃದ್ಧಿ ಕಡೆಗೆ ಗಮನಹರಿಸಬೇಕು. ಸುಮ್ಮನೆ ಸುಳ್ಳು ಆರೋಪ, ಟೀಕೆ ಮಾಡುವುದನ್ನು ಬಿಟ್ಟು ಕೆಲಸ ಮಾಡಲಿ ಅಭಿನಂದಿಸುತ್ತೇವೆ ಎಂದು ಅವರು ಸಲಹೆ ನೀಡಿದರು.
ಸಚಿವನಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಈಗಾಗಲೇ ಮಹತ್ವಾಕಾಂಕ್ಷಿಯ ಮಂಡ್ಯ ಕೃಷಿ ವಿವಿ ಮಂಜೂರಾಗಿದೆ. ಮೈಷುಗರ್ ಆರಂಭಿಸಿದ್ದೇವೆ. ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುವುದು. ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿ ಮುಗಿದಿದ್ದು, ಸದ್ಯದಲ್ಲೇ ಉದ್ಘಾಟನೆ ಆಗಲಿದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರ ಜನಪರವಾದ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕೆಲಸ ಆಗುತ್ತಿವೆ. ಇದನ್ನು ಬಿಜೆಪಿ, ಜೆಡಿಎಸ್ನವರು ಸಹಿಸಲು ಆಗುತ್ತಿಲ್ಲ. ಹಾಗಾಗಿ ಅನಗತ್ಯ ಟೀಕೆ ಮಾಡುತ್ತಿದ್ದಾರೆ. ಅವರಿಗೆ ರಾಜ್ಯದ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮೇಕೆದಾಟು ಯೋಜನೆಗೆ ಅನುಮತಿ ಸೇರಿದಂತೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆ ಪಾಲು, ಇತರೆ ಅನುದಾನ ಕೊಡಿಸಬೇಕು ಎಂದು ಅವರು ಹೇಳಿದರು.







