ಮಂಡ್ಯ | ಮದುವೆಗೆ ನಿರಾಕರಿಸಿದ ಯುವತಿಗೆ ಕೊಲೆ ಬೆದರಿಕೆ ಆರೋಪ; ಸಂಘಪರಿವಾರದ ಮುಖಂಡನ ವಿರುದ್ಧ ಎಫ್‌ಐಆರ್ ದಾಖಲು

ಮಂಡ್ಯ: ಮದುವೆಯಾಗಲು ನಿರಾಕರಿಸಿದ ಯುವತಿಗೆ ಸಂಘಪರಿವಾರದ ಮುಖಂಡ ಕೊಲೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆಕೆ ತಾಲೂಕಿನ ಕೆರಗೋಡು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿರುವುದು ವರದಿಯಾಗಿದೆ.
ತಾಲೂಕಿನ ಚಿಕ್ಕಬಳ್ಳಿ ಗ್ರಾಮದ ಬಜರಂಗದಳದ ಮುಖಂಡ ಬಾಲಕೃಷ್ಣ ಅಲಿಯಾಸ್ ಚಿಕ್ಕಬಳ್ಳಿ ಬಾಲು ಎಂಬುವರ ವಿರುದ್ಧ ಸಂತ್ರಸ್ತ ಯುವತಿ ಕಳೆದ ಮೇ 22ರಂದು ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ಮಾಡಿದ್ದಾರೆ.
ಕೊಲೆ ಬೆದರಿಕೆ ಹಾಕಿದ್ದರೂ ಇಲ್ಲಿವರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲವೆಂದು ಸಂತ್ರಸ್ತೆ ಯುವತಿ ಸೋಮವಾರ ಶಾಸಕ ಪಿ.ರವಿಕುಮಾರ್ ಗಣಿಗ ಅವರಲ್ಲಿ ಅಳಲು ತೋಡಿಕೊಂಡಿದ್ದು, ಯುವತಿಗೆ ರಕ್ಷಣೆ ನೀಡುವಂತೆ ಶಾಸಕರು ಎಸ್ಪಿ ಅವರಿಗೆ ಸೂಚಿಸಿದರು.
ದೂರಿನಲ್ಲೇನಿದೆ:
ಬಾಲಕೃಷ್ಣ ಮತ್ತು ನನ್ನ ಕುಟುಂಬದವರು ನಾಲ್ಕುವರ್ಷದ ಹಿಂದೆ ನಮ್ಮಿಬ್ಬರಿಗೆ ಮೌಖಿಕವಾಗಿ ಮದುವೆ ನಿಶ್ಚಯ ಮಾಡಿದ್ದರು. ಹೀಗಾಗಿ ನಾವಿಬ್ಬರೂ ಕೆ.ಎಂ.ದೊಡ್ಡಿ ಸಮೀಪದ ಹನುಮಂತನಗರದ ಆತ್ಮಲಿಂಗೇಶ್ವರ ಕ್ಷೇತ್ರಕ್ಕೆ ತೆರಳಿ ಪೂಜೆ ಸಲ್ಲಿಸಿದಾಗ ಬಾಲಕೃಷ್ಣ ನಮ್ಮಿಬ್ಬರ ಸೆಲ್ಫಿ ಫೋಟೋ ತೆಗೆದುಕೊಂಡಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಕೆಲವು ದಿನಗಳ ನಂತರ, ಬಾಲಕೃಷ್ಣನ ನಡತೆ ಸರಿಯಿಲ್ಲವೆಂಬ ಕಾರಣಕ್ಕೆ ಆತನ ಜತೆಗಿನ ಮದುವೆ ಪ್ರಸ್ತಾಪ ರದ್ದುಗೊಂಡಿತು. ಈ ಸಂಬಂಧ ಆತ ನಮ್ಮ ಕುಟುಂಬದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ ಎಂದು ಅವರು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.
ಮದುವೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ಬಾಲಕೃಷ್ಣ ನನಗೆ ಮತ್ತು ನನ್ನ ಕುಟಂಬದವರಿಗೆ ವಿನಾಕಾರಣ ಹಿಂಸೆ ನೀಡುತ್ತಿದ್ದಾನೆ. ಈ ನಡುವೆ ಬೇರೆ ಯುವಕನೊಡನೆ ನನ್ನ ಮದುವೆ ಪ್ರಸ್ತಾಪವಾದಾಗ, ಹಿಂದೆ ತೆಗೆದುಕೊಂಡಿದ್ದ ಫೋಟೋವನ್ನು ವರನ ಕಡೆಯವರಿಗೆ ತೋರಿಸಿ ತೊಂದರೆ ನೀಡುತ್ತಿದ್ದಾನೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಈ ನಡುವೆ ಕಳೆದ ಮೇ 7ರಂದು ನನ್ನ ದೊಡ್ಡಮ್ಮ ಲಕ್ಷ್ಮಮ್ಮ ಅವರ ಜತೆ ನಾನು ಪಕ್ಕದ ಹಲ್ಲೇಗೆರೆ ಸಂತೆಗೆ ಹೋಗಿದ್ದಾಗ, ಬಾಲಕೃಷ್ಣ ತಡೆದು ನಾನು ಬೇರೆಯ ಕಡೆ ಮದುವೆಯಾಗಲು ಬಿಡುವುದಿಲ್ಲ. ಒಂದು ವೇಳೆ ಬೇರೆಯವರೊಡನೆ ನಿಶ್ಚಯವಾದರೆ ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿದ್ದಾರೆ.







