ಜೆಡಿಎಸ್ ನಾಯಕರು ನನ್ನನ್ನು ಚುನಾವಣಾ ಪ್ರಚಾರಕ್ಕೆ ಕರೆಯಲೇ ಇಲ್ಲ : ಸುಮಲತಾ ಸ್ಪಷ್ಟನೆ

Photo : x/@KANTH_TNIE
ಮಂಡ್ಯ : ಜೆಡಿಎಸ್ನ ನಾಯಕರು ಯಾವುದೇ ಚುನಾವಣಾ ಪ್ರಚಾರ ಸಭೆಗೆ ನನ್ನನ್ನು ಆಹ್ವಾನಿಸಿಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಮತದಾನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ನವರು ಸಭೆಗೆ ಕರೆದು ನಾನು ಬರದೆದೇ ಇದ್ದರೆ ತಪ್ಪಾಗುತ್ತೆ. ಆದರೆ, ಅವರು ನನ್ನನ್ನು ಕರೆದೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ದೇವೇಗೌಡ ದೊಡ್ಡವರು, ಅವರು ಸುಮಲತಾ ಬೆಂಬಲ ನೀಡಿಲ್ಲ ಎಂದು ಹೇಳಿದ್ದಾರೆ. ಬಹುಶಃ ಅವರಿಗೆ ಸರಿಯಾದ ಮಾಹಿತಿ ಇಲ್ಲದೆ ಆ ರೀತಿ ಹೇಳಿರಬಹುದು. ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.
ಸ್ವತಂತ್ರ ಸಂಸದೆಯಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೀನಿ. ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ನಾನು ಗೆದ್ದಂತಹ ಸ್ಥಾನವನ್ನು ತ್ಯಾಗ ಮಾಡಿದ್ದೀನಿ. ನನ್ನನ್ನು ಯಾವುದೇ ಪ್ರಚಾರಕ್ಕೆ ಕರೆದಿಲ್ಲ. ಕುಮಾರಸ್ವಾಮಿ ನಮ್ಮ ಮನೆಗೆ ಬಂದು ಹೋದ ನಂತರ ನನಗೆ ಒಂದು ಫೋನ್ ಕರೆ ಮಾಡಿ ಪ್ರಚಾರಕ್ಕೆ ಬನ್ನಿ ಎಂದು ಕೇಳಿಲ್ಲ. ತ್ಯಾಗ ಮಾಡಿಯೂ ನನ್ನ ಕರೆಯಲಿಲ್ಲ ಅನ್ನೋದು ನನಗೆ ಬೇಸರವಾಗಿದೆ ಎಂದು ಅವರು ಹೇಳಿದರು.
ನನ್ನ ಅಭಿಮಾನಿಗಳು ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದರು. ಸೋತ ಸೀಟನ್ನೇ ಬಿಡಲ್ಲ, ಅದರಲ್ಲಿ ನಾನು ಗೆದ್ದ ಸೀಟನ್ನು ಬಿಟ್ಟು ಕೊಟ್ಟಿದ್ದೀನಿ. ಅವರ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಪಕ್ಷ ಸೂಚನೆ ನೀಡಿದ ಕಡೆಗೆ ನಾನು ಪ್ರಚಾರಕ್ಕೆ ಹೋಗಿದ್ದೇನೆ. ಮಂಗಳೂರುವರೆಗೂ ಹೋಗಿದ್ದೀನಿ ಎಂದು ನುಡಿದರು.







