ʼಕರ್ನಾಟಕ ಬಂದ್ʼಗೆ ಮಂಡ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

ಮಂಡ್ಯ : ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ಜಲ ನಿಯಂತ್ರಣ ಮಂಡಳಿ ಮತ್ತು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ವಿರೋಧಿಸಿ ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತಮಿಳುನಾಡಿಗೆ 15 ದಿವಸಗಳ ಕಾಲ ನಿತ್ಯ 12,000 ಕ್ಯುಸೆಕ್ ನೀರು ಹರಿಸುವಂತೆ ನೀಡಿರುವ ಆದೇಶದ ವಿರುದ್ಧ ಕನ್ನಡ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಅಖಿಲ ಕರ್ನಾಟಕ ಬಂದ್ ಗೆ ಕರೆ ನೀಡಿದ್ದರು.
ಬಂದ್ ಬೆಂಬಲಿಸಿ ರೈತ, ಪ್ರಗತಿಪರ ಹಾಗೂ ಕನ್ನಡ ಪರ ಸಂಘಟನೆಗಳು ಮಂಡ್ಯ ಜಿಲ್ಲಾ ಬಂದ್ ನಡೆಸಲು ತೀರ್ಮಾನಿಸಿದ್ದು, ಅಂತೆಯೇ ಮಂಡ್ಯ ನಗರ ಸೇರಿದಂತೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಸಾರಿಗೆ ಬಸ್ ಸಂಚಾರ ಸೇರಿದಂತೆ ಆಟೋ, ಗೂಡ್ಸ್ ಟ್ಯಾಕ್ಸಿ, ಇತರೆ ವಾಹನಗಳ ಸಂಚಾರ, ಸರಕಾರಿ ಕಚೇರಿ, ಶಾಲಾ ಕಾಲೇಜು, ಬ್ಯಾಂಕ್, ಗಾರ್ಮೆಂಟ್ಸ್ ಕಂಪನಿಗಳ ಚಟುವಟಿಕೆಗಳು ಯಾವುದೇ ತಡೆಯಿಲ್ಲದೆ ನಡೆದವು.
ಮಂಡ್ಯ ನಗರದಲ್ಲಿ ಬೆಳಗ್ಗೆ 10 ಗಂಟೆಗೆ ಜಮಾವಣೆಗೊಂಡ ವಿವಿಧ ಸಂಘಟನೆಗಳ ಮುಖಂಡರು, ನಗರದ ವಿವಿಧೆಡೆ ಸಂಚರಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಅಂತೆಯೇ ಹೋರಾಟಗಾರರ ಮನವಿಗೆ ಸ್ಪಂದಿಸಿದ ವ್ಯಾಪಾರಸ್ಥರು ಕೆಲವು ಗಂಟೆಗಳ ಕಾಲ ಅಂಗಡಿಗಳನ್ನು ಬಂದ್ ಮಾಡಿ ಸಾಂಕೇತಿಕವಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿ, ನಂತರ ತಮ್ಮ ವ್ಯಾಪಾರ ಚಟುವಟಿಕೆಗಳನ್ನು ಮುಂದುವರೆಸಿದರು.
ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ ತಾಲೂಕು ಕೇಂದ್ರಗಳಲ್ಲಿ ಭಾಗಶಃ, ಬೆಸಗರಹಳ್ಳಿ, ಕೊಪ್ಪ, ಕೆ.ಎಂ.ದೊಡ್ಡಿ, ಇತರೆ ವಾಣಿಜ್ಯ ಕೇಂದ್ರ ಗ್ರಾಮಗಳಲ್ಲಿ ಬಂದ್ ಯಶಸ್ವಿಯಾಯಿತು. ಬಂದ್ ಹಿನ್ನೆಲೆಯಲ್ಲಿ ರೈತ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಕಾವೇರಿ ಜಲ ನಿಯಂತ್ರಣ ಸಮಿತಿ ವಿರುದ್ಧ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದಲ್ಲಿ ಎಂದಿನಂತೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಸರಕಾರವು ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸಿದರು.
ಮುನ್ನೆಚ್ಚರಿಕೆಯ ಕ್ರಮವಾಗಿ ಆಯಕಟ್ಟಿನ ಸ್ಥಳದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಪ್ರತಿಭಟನಕಾರರ ಬಳಿಗೆ ತೆರಳಿದ ಜಿಲ್ಲಾಧಿಕಾರಿ ಡಾ.ಕುಮಾರ, ಶಾಂತಿಯುತವಾಗಿ ಹೋರಾಟ ನಡೆಸುವಂತೆ ಮನವಿ ಮಾಡಿದರು.






