ಎಸ್‌ಐಆರ್ | ಮಂಡ್ಯ ಜಿಲ್ಲೆಯಲ್ಲಿ 14,27,462 ಮತದಾರರು

ಮಂಡ್ಯ : ಜಿಲ್ಲೆಯಲ್ಲಿ ಕೈಗೊಂಡಿದ್ದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 14,27,462 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.
ಆಗಸ್ಟ್ 24ರಂದು ಪ್ರಕಟಿಸಿದ್ದ ಕರಡು ಮತದಾರರ ಪಟ್ಟಿಯಲ್ಲಿ 14,08,364 ಮತದಾರರಿದ್ದರು. ಕರಡು ಪಟ್ಟಿ ಪ್ರಕಟಿಸಿದ ಬಳಿಕ ನಕ್ಷೆ ಹೊಂದಾಣಿಕೆಯಾಗದ ಪ್ರಕರಣಗಳು ಹಾಗೂ ತಾರ್ಕಿಕ ವ್ಯತ್ಯಾಸಗಳ ಹಿನ್ನೆಲೆಯಲ್ಲಿ ಒಟ್ಟು 1,50,269 ಮತದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ಹಕ್ಕು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ, ನಿಯಮಾನುಸಾರ ವಿಲೇವಾರಿ ಮಾಡಿದ ಬಳಿಕ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಅಂತಿಮ ಪಟ್ಟಿಯಲ್ಲಿ 6,99,657 ಪುರುಷರು, 7,27,718 ಮಹಿಳೆಯರು ಹಾಗೂ 87 ತೃತೀಯ ಲಿಂಗಿ ಮತದಾರರಿದ್ದಾರೆ.
ಕರಡು ಪಟ್ಟಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ 19,098 ಮತದಾರರ ನಿವ್ವಳ ಹೆಚ್ಚಳವಾಗಿದೆ.
ಮಂಗಳವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಸಮಗ್ರ ಮತದಾರರ ಅಂತಿಮ ಪಟ್ಟಿಯ ಪ್ರತಿಯನ್ನು ಜಿಲ್ಲಾಧಿಕಾರಿ ಡಾ.ಕುಮಾರ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಿದರು. ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವನಂದಮೂರ್ತಿ ಉಪಸ್ಥಿತರಿದ್ದರು.






