ಬಿಜೆಪಿಯವರು ಬೆಂಕಿಹಚ್ಚುವ ಕೆಲಸ ಮಾಡುವುದನ್ನು ನಿಲ್ಲಿಸಬೇಕು : ಮದ್ದೂರು ಶಾಸಕ ಕೆ.ಎಂ.ಉದಯ್

ಮಂಡ್ಯ, ಸೆ.17 : ಮದ್ದೂರಿನ ಗಣೇಶಮೂರ್ತಿ ಮೇಲೆ ಕಲ್ಲು ತೂರಾಟ ಪ್ರಕರಣವನ್ನು ರಾಜಕೀಯಕ್ಕೆ ದುರುಪಯೋಗಪಡಿಸಿಕೊಳ್ಳುವ ಕೆಲಸಕ್ಕೆ ಕೆಲವರು ನಿಂತಿದ್ದಾರೆ. ನಮ್ಮ ಜನ ಇಂತಹದ್ದನ್ನು ಒಪ್ಪುವುದಿಲ್ಲ, ಸಹಿಸುವುದೂ ಇಲ್ಲ. ಇನ್ನು ಮುಂದಾದರೂ ಬೆಂಕಿಹಚ್ಚುವ ಕೆಲಸ ಮಾಡುವುದನ್ನು ನಿಲ್ಲಿಸಬೇಕು ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಮದ್ದೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯವನ್ನು ಮಂಗಳೂರು ಮಾಡಲು ಹೊರಟಿದ್ದಾರೆ. ಅಲ್ಲಿ ಇವರ ಪ್ರಚೋದನೆಯಿಂದ ಅಮಾಯಕ ಯುವಕರು ಬಲಿಯಾಗುತ್ತಿದ್ದಾರೆ. ಇಲ್ಲಿಯೂ ಅದನ್ನು ಮಾಡಲು ಹೊರಟಿದ್ದಾರೆ. ಆದರೆ, ಮಂಡ್ಯದ ಪ್ರಬುದ್ಧ ಜನ ಇಂತಹದ್ದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಕಿಡಿಕಾರಿದರು.
ಕಲ್ಲು ತೂರಾಟ ನಡೆಸಿದವರಿಗೆ ಕ್ಷಮೆಯೇ ಇಲ್ಲ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಆಗುತ್ತದೆ. ಯಾವ ಪಕ್ಷದವರೇ ಆದರೂ ಸಮಾಜದ ಶಾಂತಿ ಕಾಪಾಡುವ ಕೆಲಸ ಮಾಡಬೇಕು. ರಾಜಕೀಯ ಲಾಭಕ್ಕೋಸ್ಕರ ಬೆಂಕಿ ಹಚ್ಚುವ ಕೆಲಸವನ್ನು ನಾವು ಖಂಡಿಸುತ್ತೇವೆ. ಎಲ್ಲಿಂದಲೋ ಬಂದು ಇಲ್ಲಿನ ಜನರನ್ನು ಪರಸ್ಪರ ಎತ್ತಿಕಟ್ಟುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಸಲಹೆ ನೀಡಿದರು.
ಇವರ(ಬಿಜೆಪಿ) ಸರಕಾರದಲ್ಲಿ ಮದ್ದೂರು ತಾಲೂಕಿಗೆ ಕೊಡುಗೆ ಏನಿದೆ? ಹಿಂದೂ ಜನಾಂಗಕ್ಕಾಗಲೀ, ದೇವಸ್ಥಾನಗಳಿಗಾಗಲೀ ಏನು ಕೊಟ್ಟಿದ್ದಾರೆ? ರಸ್ತೆ ಮಾಡಿಸಿದ್ದಾರ? ರೈತರ ನೀರಾವರಿಗೆ ಸಹಾಯ ಮಾಡಿದ್ದಾರ? ಆದರೆ, ನಮ್ಮ ಸರಕಾರದಲ್ಲಿ 1,500 ರೂ.ಗಳ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದಕ್ಕೆ ಸಾಕ್ಷಿ ಇದೆ. ಇಂತಹ ಆಟವನ್ನೆಲ್ಲಾ ಬಿಡಬೇಕು ಎಂದು ಅವರು ತಿರುಗೇಟು ನೀಡಿದರು.
‘ಇನ್ನೊಬ್ಬ ಬಂದು ಹೇಳ್ತಾನಂತೆ, ನಾನು ಮೋಜು ಮಾಡಕ್ಕೆ ವಿದೇಶಕ್ಕೆ ಹೋಗಿದ್ದೆ ಅಂತ. ಇವರಪ್ಪನಿಗೆ ಅಧಿಕಾರ ಬರಬೇಕಾದರೆ ಯಾರು ಕಷ್ಟಪಟ್ಟರು ಎನ್ನುವುದನ್ನು ಅಷ್ಟುಬೇಗ ಮರೆತುಬಿಟ್ಟವನೆ. ಅವರಪ್ಪನ ಮೇಲೆ ಎಷ್ಟು ಕೇಸ್ ಫಿಕ್ಸ್ ಆಗಿವೆ? ಲಂಚ, ಪೋಕ್ಸೋ, ರೇಪ್ ಕೇಸ್ ಫಿಕ್ಸ್ ಮಾಡಿಸಿಕೊಂಡು ಜೈಲಿಗೋದೋರು ಯಾರು? ಇಂತಹವರು ಬಂದು ಮದ್ದೂರು ಉದ್ಧಾರ ಮಾಡ್ತಾರ?’ ಎಂದು ಅವರು ಬಿ.ವೈ.ವಿಜಯೇಂದ್ರ ವಿರುದ್ದ ಆಕ್ರೋಶ ಹೊರಹಾಕಿದರು.
‘ತೊಡೆ ಮುರಿತಾನಂತೆ, ಕತ್ತು ತೆಗೆಯುತ್ತಾನಂತೆ. ಯಾರೋ ಮಲೆನಾಡಿನಿಂದ ಬಂದವನೋ, ಶಿವಮೊಗ್ಗದಿಂದ ಬಂದವನೋ. ಅವನಿಂದ ಬುದ್ದಿ ಹೇಳಿಸಿಕೊಳ್ಳುವ ಅವಶ್ಯಕತೆ ನಮಿಗೆ ಇಲ್ಲ. ಮೊದಲು ಅವರ ಮನೆ ತೂತು ಸರಿಪಡಿಸಿಕೊಳ್ಳಲಿ’ ಎಂದು ಅವರು ಸಿ.ಟಿ.ರವಿಗೆ ತಿರುಗೇಟು ನೀಡಿದರು.
ಜೆಡಿಎಸ್‍ನವರ ಮೈತ್ರಿ ದುರ್ಬಳಕೆ ಮಾಡಿಕೊಂಡು ಬಿಜೆಪಿ, ಆರ್‌ಎಸ್‍ಎಸ್ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಜತೆಜತೆಗೆ ಜೆಡಿಎಸ್ ಅನ್ನೂ ಮುಗಿಸುತ್ತಿದ್ದಾರೆ. ಇನ್ನು ಸುಮಲತಾ ಅವರು ಬಿಜೆಪಿ ಸೇರಿಕೊಂಡಿರುವುದರಿಂದ ಬಿಜೆಪಿವರ ಗಾಳಿ ಅವರ ಮೇಲೂ ಬೀಸುತ್ತಿದೆ ಎಂದು ಅವರು ಉದಯ್ ಟೀಕಿಸಿದರು.
ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಪುರಸಭೆ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಪುಟ್ಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೈಲೂರು ಚಲುವರಾಜು, ಅಣ್ಣೂರು ರಾಜೀವ್, ಮನ್‍ಮುಲ್ ನಿರ್ದೇಶಕ ಹರೀಶ್ ಬಾಬು, ಇತರ ಮುಖಂಡರು ಉಪಸ್ಥಿತರಿದ್ದರು.
‘ಅವನ್ಯಾರೋ ಪ್ರತಾಪ ಸಿಂಹನಂತೆ, ಅಪ್ಪಿತಪ್ಪಿ ಸಿಂಹ ಅಂತ ಹೆಸರಿಟ್ಟುಬಿಟ್ಟವರೆ. ಅತನ ಹೆಸರ ಮುಂದೆ ‘ನಾಯಿ’ ಅಂತ ಹೆಸರಿಡಬೇಕಾಗಿತ್ತು. ಅವನ ಹಿನ್ನೆಲೆ ಎಲ್ಲ ಗೊತ್ತಿದೆ. ಅವನ ಹೆಂಡತಿಯೇ ಅವನ ಕಾಟ ಸಹಿಸಿಕೊಳ್ಳಲಾಗದೆ ಬಿಜೆಪಿ ಹೈಕಮಾಂಡ್‍ಗೆ ಲೆಟರ್ ಬರೆದವರೆ. ಇವನ ನಡೆತೆ ಸರಿಯಿಲ್ಲ, ಕಚ್ಚೆಹರುಕ ಎಂದು ಮೈಸೂರಿನಲ್ಲಿ ಹಲವರು ಮಾತನಾಡ್ತಾರೆ. ಬಿಜೆಪಿಯವರೇ ಟಿಕೆಟ್ ಕೊಡದೆ ಕ್ಯಾಕರಿಸಿ ಉಗಿದು ಮನೆಯಲ್ಲಿ ಕೂರಿಸಿದ್ದಾರೆ. ಇಂತಹವನು ಇಲ್ಲಿ ಬಂದು ಮಂಡ್ಯ ಜನಕ್ಕೆ ತಿಳಿವಳಿಕೆ ಹೇಳ್ತಾನಂತೆ. ಇದನ್ನು ನಂಬಬೇಕಾ ನಮ್ಮ ಜನ?”
-ಕೆ.ಎಂ.ಉದಯ್, ಮದ್ದೂರು ಶಾಸಕ.







