Malavalli | ಮುಖ್ಯ ಶಿಕ್ಷಕಿಯ ವರ್ತನೆಯಿಂದ ಬೇಸತ್ತ ಪಾಲಕರು; ಸಾಮೂಹಿಕ ಟಿಸಿಗೆ ಆಗ್ರಹಿಸಿ ಬಿಇಒ ಕಚೇರಿ ಎದುರು ಧರಣಿ

ಮಳವಳ್ಳಿ : ತಾಲೂಕಿನ ಅಮೃತೇಶ್ವರನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವರ್ತನೆಯಿಂದ ಬೇಸತ್ತ ಪಾಲಕರು, ತಮ್ಮ ಮಕ್ಕಳಿಗೆ ಸಾಮೂಹಿಕ ವರ್ಗಾವಣೆ ಪತ್ರ ನೀಡುವಂತೆ ಆಗ್ರಹಿಸಿ ಬುಧವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ.
ಆಕ್ರೋಶಕ್ಕೆ ಕಾರಣವೇನು?: ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪುಟ್ಟವೀರಮ್ಮ ವಿರುದ್ಧ ಮಕ್ಕಳ ಪಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರಣಿಯಲ್ಲಿ ಪಾಲ್ಗೊಂಡಿದ್ದ ಪಾಲಕ ಸೋಮಶೇಖರ್ ಮಾತನಾಡಿ, 1ರಿಂದ7ನೇ ತರಗತಿವರೆಗೆ ಇರುವ ಈ ಶಾಲೆ ದಾಖಲಾತಿ ಕೊರತೆಯಿಂದ ಹಲವು ವರ್ಷಗಳ ಹಿಂದೆ ಮುಚ್ಚುವ ಸ್ಥಿತಿಯಲ್ಲಿತ್ತು. ಆದರೆ ಗ್ರಾಮದ ಯುವಕರು ’ಅಮೃತ ಚಾರಿಟಬಲ್ ಟ್ರಸ್ಟ್’ ರಚಿಸಿಕೊಂಡು, ಎಸ್‌ಡಿಎಂಸಿ ಸಮಿತಿಯ ಜತೆಗೂಡಿ 143 ಮಕ್ಕಳನ್ನು ದಾಖಲಾತಿ ಮಾಡಿಸಿ ಶಾಲೆಯನ್ನು ಉಳಿಸಿದ್ದೇವೆ. ಟ್ರಸ್ಟ್ ವತಿಯಿಂದ ಕೊರತೆ ಇರುವ ಶಿಕ್ಷಕರನ್ನು ನೇಮಿಸಿ ವೇತನ ಭರಿಸುವುದರ ಜತೆಗೆ ಶಾಲೆಯ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.
ಆದರೆ ಇತ್ತೀಚೆಗೆ ಮುಖ್ಯ ಶಿಕ್ಷಕಿಯಾಗಿ ಬಂದಿರುವ ಪುಟ್ಟವೀರಮ್ಮ ಮಕ್ಕಳಿಗೆ ಗುಣಮಟ್ಟವಿಲ್ಲದ ಬಿಸಿಯೂಟ ನೀಡುವುದು ಸೇರಿದಂತೆ ಮಕ್ಕಳ ಮನಸ್ಥಿತಿ ಮೇಲೆ ದುಷ್ಪರಿಣಾಮ ಬೀರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಈ ನಡೆಯನ್ನು ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಲು ಶಾಲೆಗೆ ತೆರಳಿದ್ದ ಎಸ್‌ಡಿಎಂಸಿ ಸಮಿತಿ ಹಾಗೂ ಪಾಲಕರಿಗೆ ‘ನಿಮ್ಮ ವಿರುದ್ಧ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ದೂರು-ಪ್ರತಿದೂರು ಸರಮಾಲೆ: ಶಿಕ್ಷಕಿಯ ವರ್ತನೆಯಿಂದ ಆತಂಕಗೊಂಡು ಬಿಇಒ ಅವರಿಗೆ ಎಸ್‌ಡಿಎಂಸಿ ಸಮಿತಿ ವತಿಯಿಂದ ದೂರು ಸಲ್ಲಿಸಲಾಗಿತ್ತು. ಅದರಂತೆ ಶಿಕ್ಷಣ ಸಂಯೋಜಕರು ಶಾಲೆಗೆ ಆಗಮಿಸಿ ಸಭೆ ನಡೆಸಿ ಶಿಕ್ಷಕಿಗೆ ತಿಳಿ ಹೇಳಿ ತೆರಳಿದರೂ ಅನುಚಿತ ವರ್ತನೆ ಮುಂದುವರಿದಿತ್ತು. ಇದರಿಂದ ಬೇಸತ್ತು ಮುಖ್ಯ ಶಿಕ್ಷಕಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಆದರೆ ಮುಖ್ಯ ಶಿಕ್ಷಕಿ ಪುಟ್ಟವೀರಮ್ಮ ಬಿಇಒ ಸೇರಿದಂತೆ ಎಸ್‌ಡಿಎಂಸಿ ಸಮಿತಿ ಹಾಗೂ ಪಾಲಕರ ವಿರುದ್ಧ ಕಿರುಕುಳ ಆರೋಪ ಮಾಡಿ ಪ್ರತಿ ದೂರು ದಾಖಲಿಸಿದ್ದಾರೆ ಎಂದು ಪಾಲಕರು ಕಿಡಿಕಾರಿದರು.
ಬಿಇಒ ಅನುಪಸ್ಥಿತಿಯಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀನಿವಾಸ್ ಸ್ಥಳಕ್ಕೆ ಆಗಮಿಸಿ ಅರ್ಜಿಗಳನ್ನು ಸ್ವೀಕರಿಸಿ, ಮೇಲಧಿಕಾರಿಗಳಿಗೆ ವರದಿ ನೀಡಿ ಶೀಘ್ರವಾಗಿ ಸಮಸ್ಯೆ ಪರಿಹರಿಸಿಕೊಡುವ ಭರವಸೆ ನೀಡಿದ ನಂತರ ಪಾಲಕರು ಧರಣಿ ಕೈಬಿಟ್ಟರು.
ಬಿಇಒ ಸ್ಪಷ್ಟನೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ನಾನು ಈಗಾಗಲೇ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಆದರೆ ಹಿರಿಯ ಪ್ರಭಾರದಲ್ಲಿದ್ದ ಶಿಕ್ಷಕರೊಬ್ಬರು ರಜೆಯಲ್ಲಿ ಇರುವ ಕಾರಣ ತನಿಖೆ ಬಾಕಿ ಇದೆ. ನಾನು ನ್ಯಾಯಾಲಯದ ಪ್ರಕರಣದ ಸಂಬಂಧ ಬೆಂಗಳೂರಿಗೆ ಬಂದಿದ್ದು, ನಾಳೆ ಮತ್ತೊಮ್ಮೆ ಶಾಲೆಗೆ ಭೇಟಿ ನೀಡಿ ಗ್ರಾಮದ ಜನರ ವಿಶ್ವಾಸದೊಂದಿಗೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.
ಪಾಲಕರ ಪಟ್ಟು
ಸರಕಾರಿ ಶಾಲೆಗಳು ಮುಚ್ಚದಂತೆ ಇಡೀ ಗ್ರಾಮವೇ ಒಮ್ಮತದಿಂದ ಶ್ರಮಿಸುತ್ತಿರುವಾಗ ಮುಖ್ಯ ಶಿಕ್ಷಕಿ ಪುಟ್ಟವೀರಮ್ಮ ಅವರ ಅನುಚಿತ ವರ್ತನೆ ಬೇಸರ ಉಂಟುಮಾಡಿದೆ. ಇಂತಹ ಶಿಕ್ಷಕರಿಂದ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವ ನಿರೀಕ್ಷೆ ಇಲ್ಲ. ಹಾಗಾಗಿ ಕೂಡಲೇ ಶಾಲೆಯ ಮುಖ್ಯ ಶಿಕ್ಷಕಿಯನ್ನು ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಮಕ್ಕಳಿಗೆ ವರ್ಗಾವಣೆ ನೀಡಿ ಎಂದು ಒತ್ತಾಯಿಸಿ ಪಾಲಕರು ಸಾಮೂಹಿಕ ಟಿಸಿ ಅರ್ಜಿಗಳನ್ನು ಹಿಡಿದು ಬಿಇಒ ಕಚೇರಿ ಮುಂದೆ ಧರಣಿ ಕುಳಿತರು.






