Malavalli : ಕೋಡಿಹಳ್ಳಿ ಕಸ್ತೂರಿಬಾ ವಸತಿ ಶಾಲೆಯ 27 ವಿದ್ಯಾರ್ಥಿನಿಯರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಮಳವಳ್ಳಿ : ಮಳವಳ್ಳಿ ತಾಲೂಕಿನ ಕೋಡಿಹಳ್ಳಿ ಕಸ್ತೂರಿಬಾ ಗಾಂಧಿ ಬಾಲಿಕಾ ವಸತಿ ಶಾಲೆಯ 27 ವಿದ್ಯಾರ್ಥಿನಿಯರು ಆಹಾರ ಸೇವನೆಯ ಬಳಿಕ ಅಸ್ವಸ್ಥಗೊಂಡಿದ್ದು, ಹೊಟ್ಟೆ ನೋವು ಮತ್ತು ಆಯಾಸದಿಂದ ಬಳಲುತ್ತಿದ್ದ ಅವರನ್ನು ಮಳವಳ್ಳಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲಾ ವಿದ್ಯಾರ್ಥಿನಿಯರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಶಾಲೆಯಲ್ಲಿ ಒಟ್ಟು 111 ವಿದ್ಯಾರ್ಥಿನಿಯರಿದ್ದು, ಕಳೆದ ರಾತ್ರಿ ನುಗ್ಗೆ ಸೊಪ್ಪು ಸಾಂಬಾರ್ ಊಟ ಸೇವಿಸಿದ್ದರು. ಗುರುವಾರ ಬೆಳಗ್ಗೆ ತಿಂಡಿಗೆ ಅವಲಕ್ಕಿ ನೀಡಲಾಗಿತ್ತು. ಮಧ್ಯಾಹ್ನದ ಬಳಿಕ 27 ವಿದ್ಯಾರ್ಥಿನಿಯರಿಗೆ ಹೊಟ್ಟೆ ನೋವು, ವಾಂತಿ ಮತ್ತು ಆಯಾಸ ಕಾಣಿಸಿಕೊಂಡಿದ್ದು, ತಕ್ಷಣ ಶಾಲಾ ಸಿಬ್ಬಂದಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆತಂದಿದ್ದಾರೆ. ಫುಡ್ ಪಾಯ್ಸನ್‌ನಿಂದ ಆರೋಗ್ಯದಲ್ಲಿ ಅಸ್ವಸ್ಥತೆ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ.
ವೈದ್ಯಕೀಯ ನಿಗಾ: ಮಳವಳ್ಳಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಂಜಯ್ ನೇತೃತ್ವದ ತಂಡ ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದೆ. ಯಾವುದೇ ಮಗುವಿಗೂ ತೀವ್ರ ಅಸ್ವಸ್ಥತೆ ಇಲ್ಲ. ಮುನ್ನೆಚ್ಚರಿಕೆಯಾಗಿ ಸಂಜೆಯವರೆಗೂ ನಿಗಾದಲ್ಲಿ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಹಾರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಅಧಿಕಾರಿಗಳ ಭೇಟಿ: ವಿಷಯ ತಿಳಿದು ಶಿಕ್ಷಣ ಇಲಾಖೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಲಕ್ಷ್ಮೀ, ಇಒ ಶ್ರೀನಿವಾಸ್, ಬಿಇಒ ಉಮಾ ಅವರು ಮಳವಳ್ಳಿ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ಸುದ್ದಿ ತಿಳಿದು ಆತಂಕಗೊಂಡ ಪಾಲಕರು ಆಸ್ಪತ್ರೆಗೆ ಆಗಮಿಸಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.
ಪೋಷಕರ ಆತಂಕ, ಶಿಕ್ಷಕರಿಗೆ ದುಂಬಾಲು
ಘಟನೆಯಿಂದ ಆತಂಕಗೊಂಡ ಪೋಷಕರು ಆಸ್ಪತ್ರೆಗೆ ಆಗಮಿಸಿದ್ದು, ಮಕ್ಕಳನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗಲು ಅನುಮತಿ ನೀಡುವಂತೆ ಶಾಲೆಯ ಶಿಕ್ಷಕರಲ್ಲಿ ದುಂಬಾಲು ಬಿದ್ದರು. ಯತ್ತಂಬಾಡಿಯ ಗಗನ ಎಂಬ ಪೋಷಕರೊಬ್ಬರು, ‘ನನ್ನ ಮಗಳು ಇದೇ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಮಗಳ ಆರೋಗ್ಯದ ಬಗ್ಗೆ ಭಯವಿದೆ. ನಮ್ಮ ಜೊತೆಗೆ ಕಳುಹಿಸಿಕೊಟ್ಟರೆ ಮನೆಯಲ್ಲೇ ನಿಗಾ ವಹಿಸುತ್ತೇವೆ. ನುಗ್ಗೆ ಸೊಪ್ಪು ತಿನ್ನುವುದರಿಂದ ಮಾತ್ರ ಈ ಪ್ರಮಾಣದಲ್ಲಿ ಆರೋಗ್ಯದಲ್ಲಿ ಏರುಪೇರು ಆಗಲು ಸಾಧ್ಯವಿಲ್ಲ. ಆಹಾರದಲ್ಲಿ ಏನೋ ವ್ಯತ್ಯಾಸವಾಗಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಬಿಇಒ ಸ್ಪಷ್ಟನೆ
ಮಕ್ಕಳಿಗೆ ಈಗಾಗಲೇ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯದಲ್ಲಿ ಚೇತರಿಕೆ ಕಂಡರೂ ಅವರನ್ನು ಆಸ್ಪತ್ರೆಯಲ್ಲೇ ಇರಿಸಲಾಗಿದೆ. ಘಟನೆ ಕುರಿತು ಇಲಾಖಾ ಮಟ್ಟದಲ್ಲಿ ಸೂಕ್ಷ್ಮವಾಗಿ ತನಿಖೆ ನಡೆಸಿ, ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿ ಸಿಬ್ಬಂದಿಗಳಿಂದ ಲೋಪ ಕಂಡುಬಂದಲ್ಲಿ ಮೇಲಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ವರದಿ ಸಲ್ಲಿಸಲಾಗುವುದು. ಜೊತೆಗೆ ಇತರ ವಸತಿ ಶಾಲೆಗಳಲ್ಲೂ ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಬಿಇಒ ಉಮಾ ತಿಳಿಸಿದರು.






