Malavalli | ರಾವಣಿ ಶಾಲೆ ಬಿಸಿಯೂಟದಲ್ಲಿ ಹಲ್ಲಿ ಬಾಲದ ಶಂಕೆ; 67 ಮಕ್ಕಳಿಗೆ ತಪಾಸಣೆ, ಆರೋಗ್ಯ ಸ್ಥಿರ

ಸಾಂದರ್ಭಿಕ ಚಿತ್ರ | PC : Gemini AI
ಮಳವಳ್ಳಿ : ತಾಲೂಕಿನ ರಾವಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಧ್ಯಾಹ್ನ ಬಿಸಿಯೂಟ ಸೇವಿಸುವ ವೇಳೆ ಊಟದಲ್ಲಿ ಹಲ್ಲಿ ಬಾಲದಂತಹ ವಸ್ತು ಕಂಡುಬಂದ ಹಿನ್ನೆಲೆಯಲ್ಲಿ 67 ವಿದ್ಯಾರ್ಥಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದ ಸರಕಾರಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು.
ಘಟನೆಯ ಹಿನ್ನೆಲೆ: ಶಾಲೆಯಲ್ಲಿ ಒಟ್ಟು 67 ಮಕ್ಕಳುದಾಖಲಾಗಿದ್ದಾರೆ. ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬನಿಗೆ ಊಟದಲ್ಲಿ ಹಲ್ಲಿ ಬಾಲದಂತಹ ವಸ್ತು ದೊರೆತಿದೆ. ತಕ್ಷಣ ಶಿಕ್ಷಕರ ಗಮನಕ್ಕೆ ತರಲಾಗಿದ್ದು, ಮುಖ್ಯ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಅವರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ತಕ್ಷಣ ಶಾಲೆಗೆ ಧಾವಿಸಿದ ಬಿಇಒ ಉಮಾ, ತಾಲೂಕು ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿ, ಆ್ಯಂಬುಲೆನ್ಸ್ ಗಳನ್ನು ಕರೆಸಿ ಊಟ ಸೇವಿಸಿದ್ದ ಎಲ್ಲಾ 67 ಮಕ್ಕಳನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ಕರೆತಂದರು.
ವೈದ್ಯಕೀಯ ನಿಗಾ: ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಂಜಯ್ ನೇತೃತ್ವದ ವೈದ್ಯರ ತಂಡ ಹಾಗೂ ಆರೋಗ್ಯ ಸಹಾಯಕಿಯರು ಸಜ್ಜಾಗಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು. ಯಾವುದೇ ಮಕ್ಕಳಲ್ಲಿ ಆರೋಗ್ಯದಲ್ಲಿ ಏರುಪೇರು ಅಥವಾ ಅಸ್ವಸ್ಥತೆಯ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಸಂಜೆಯವರೆಗೂ ಮಕ್ಕಳನ್ನು ವಾರ್ಡ್ ನಲ್ಲಿ ಇರಿಸಿ ವೈದ್ಯರ ತಂಡ ನಿಗಾ ವಹಿಸಿತು.
ಅಧಿಕಾರಿಗಳ ಹೇಳಿಕೆ: ಬಿಇಒ ಉಮಾ ಮಾತನಾಡಿ, ಮಕ್ಕಳಲ್ಲಿ ಅಸ್ವಸ್ಥ ಲಕ್ಷಣ ಇಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ತಪಾಸಣೆಗೆ ಒಳಪಡಿಸಲಾಗಿದೆ. ಘಟನೆ ಕುರಿತು ಇಲಾಖಾ ಮಟ್ಟದಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಿ, ತಪ್ಪು ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.






