ಮಂಡ್ಯ | ಮಧ್ಯಾಹ್ನ ಬಿಸಿಯೂಟದ ಜತೆ ಮೊಟ್ಟೆ ವಿರೋಧಿಸಿ ಮಕ್ಕಳನ್ನು ಬೇರೆ ಶಾಲೆಗೆ ಸೇರಿದ ಪೋಷಕರು!

ಸಾಂದರ್ಭಿಕ ಚಿತ್ರ | PC : freepik
ಮಂಡ್ಯ, ಆ.14 : ತಾಲೂಕಿನ ಆಲಕೆರೆ ಗ್ರಾಮದ ಸರಕಾರಿ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟದ ಜತೆ ಮೊಟ್ಟೆ ವಿತರಣೆ ಬಗ್ಗೆ ಪರ-ವಿರೋಧ ಗೊಂದಲ ಬಗೆಹರಿಯದ ಕಗ್ಗಂಟಾಗಿದ್ದು, ಮೊಟ್ಟೆ ವಿತರಣೆಗೆ ವಿರೋಧವಿದ್ದ ಒಂದು ಸಮುದಾಯದ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಿದ್ದಾರೆ.
ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೆ ಸುಮಾರು 120 ಮಕ್ಕಳು ಕಲಿಯುತ್ತಿದ್ದು, ಇದೀಗ ಒಂದು ಸಮುದಾಯದ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಿರುವುದರಿಂದ ಶಾಲೆಯ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ ಎಂದು ತಿಳಿದು ಬಂದಿದೆ.
ಗ್ರಾಮದಲ್ಲಿ ಬಹುಸಂಖ್ಯಾತ ಸಮುದಾಯವಾದ ಲಿಂಗಾಯತರ ಸುಮಾರು 400ರಿಂದ 500 ಕುಟುಂಬಗಳಿವೆ. ಉಳಿದಂತೆ 200 ದಲಿತ, 100 ಒಕ್ಕಲಿಗ, 20 ಇತರೆ ಹಿಂದುಳಿದ ವರ್ಗಗಳ ಕುಟುಂಬಗಳಿವೆ. ಲಿಂಗಾಯತ ಸಮುದಾಯದ ಸುಮಾರು 89 ಮಕ್ಕಳು ಪಕ್ಕದ ಕೀಲಾರ, ಮತ್ತಿತರ ಶಾಲೆಗಳಿಗೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ.
ಮಕ್ಕಳ ಅಪೌಷ್ಠಿಕತೆ ತಗ್ಗಿಸುವ ಉದ್ದೇಶದಿಂದ ಸರಕಾರ ಮಧ್ಯಾಹ್ನದ ಬಿಸಿಯೂಟದ ಜತೆಗೆ ಮೊಟ್ಟೆ ಕೊಡುತ್ತಿದೆ. ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡಲಾಗುತ್ತದೆ. ಆದರೆ, ಆಲಕೆರೆ ಗ್ರಾಮದಲ್ಲಿ ಮೊಟ್ಟೆ ವಿತರಣೆಗೆ ವಿರೋಧ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಎಲ್ಲ ಮಕ್ಕಳಿಗೂ ಬಾಳೆಹಣ್ಣು, ಚಿಕ್ಕಿ ವಿತರಿಸಲಾಗುತ್ತಿತ್ತು.
ಕೆಲವು ತಿಂಗಳ ಹಿಂದೆ ಗ್ರಾಮದ ಕೆಲವು ಯುವಕರು, ಪೋಷಕರು, ಸರಕಾರದ ಆದೇಶದಂತೆ ಶಾಲೆಯ ತಮ್ಮ ಮಕ್ಕಳಿಗೂ ಮೊಟ್ಟೆ ವಿತರಿಸಬೇಕು ಎಂದು ಕೇಳಿದಾಗ, ಲಿಂಗಾಯತ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದಲ್ಲದೆ, ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಮುಂದುವರಿದು ಹದಿನೈದು ದಿನದ ಹಿಂದೆ ಕೆಲವು ಪೋಷಕರು ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರಕಾರದ ಆದೇಶದಂತೆ ತಮ್ಮ ಗ್ರಾಮದ ಶಾಲೆಯ ಮಕ್ಕಳಿಗೂ ಮೊಟ್ಟೆ ವಿತರಣೆಗೆ ಕ್ರಮವಹಿಸಬೇಕೆಂದು ಮನವಿ ಸಲ್ಲಿಸಿದ್ದರು. ಸರಕಾರದ ಆದೇಶದಂತೆ ಶಾಲೆಯ ಶಿಕ್ಷಕರು ಬಯಸಿದ ಮಕ್ಕಳಿಗೆ ಮೊಟ್ಟೆ ವಿತರಣೆ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಲಿಂಗಾಯತ ಸಮುದಾಯದ ಪೋಷಕರು, ತಮ್ಮ ಮಕ್ಕಳ ವರ್ಗಾವಣೆ ಪತ್ರ ತೆಗೆದುಕೊಂಡು ಪಕ್ಕದ ಗ್ರಾಮದ ಶಾಲೆಗೆ ಸೇರಿಸಿದ್ದಾರೆ. ಪರಿಣಾಮ ಶಾಲೆಯಲ್ಲಿ ಮಕ್ಕಳ ಪ್ರವೇಶ ಕುಸಿದಿದೆ. ಉಳಿದಿರುವ ಮಕ್ಕಳಿಗೆ ಶಿಕ್ಷಕರು ಮೊಟ್ಟೆಯನ್ನು ನೀಡುತ್ತಿದ್ದಾರೆ.
ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನವಿದೆ. ಹಾಗಾಗಿ ತಮ್ಮ ಮಕ್ಕಳಿಗಲ್ಲದೆ ಇತರ ಮಕ್ಕಳಿಗೂ ಶಾಲೆಯಲ್ಲಿ ಬೇಯಿಸಿದ ಮೊಟ್ಟೆ ಕೊಡಬಾರದು. ಒಂದು ವೇಳೆ ಮೊಟ್ಟೆ ವಿತರಿಸುವುದಾದರೆ, ತಿನ್ನುವ ಮಕ್ಕಳ ಮನೆಗೇ ಹಸಿಮೊಟ್ಟೆಯನ್ನೇ ವಿತರಣೆ ಮಾಡಿ, ಶಾಲೆಯಲ್ಲಿ ಬೇಡ ಎಂಬುದು ಲಿಂಗಾಯತ ಸಮುದಾಯದ ಪೋಷಕರ ವಾದ.
ಶಾಲೆಗೂ ದೇವಸ್ಥಾನಕ್ಕೂ ಬಹಳ ದೂರವಿದೆ. ಹಾಗಾಗಿ ಶಾಲೆಯಲ್ಲಿ ಮೊಟ್ಟೆ ವಿತರಿಸಿದರೆ ತಪ್ಪಾಗುವುದಿಲ್ಲ. ಶಾಲೆಯಲ್ಲಿ ಮೊಟ್ಟೆ ವಿತರಣೆ ಮಾಡಿದರೆ ದೇವರಿಗೆ ಮೈಲಿಗೆ ಆಗುತ್ತದೆ ಎಂದಾದರೆ, ಮನೆಯಲ್ಲಿ ಮಾಡಿದರೆ ಮೈಲಿಗೆ ಆಗುವುದಿಲ್ಲವೆ? ಎಂಬುದು ಮೊಟ್ಟೆ ವಿತರಣೆಗೆ ಪಟ್ಟುಹಿಡಿದಿರುವ ಪೋಷಕರ ಪ್ರಶ್ನೆಯಾಗಿದೆ.
ತಮ್ಮ ಪಟ್ಟು ಸಡಿಲಿಸದ ಲಿಂಗಾಯತ ಸಮುದಾಯದ ಪೋಷಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಬೇರೆ ಶಾಲೆಗೆ ಕಳುಹಿಸಿದ್ದಾರೆ. ಸಾಕಷ್ಟು ಶಿಕ್ಷಕರ ಜತೆಗೆ ಸುಸಜ್ಜಿತ ಶಾಲೆ ಇಂದು ಮಕ್ಕಳ ಕೊರತೆ ಎದುರಿಸುವಂತಾಗಿದೆ.







