Mandya | ಸಿಗರೇಟ್ ವಿಚಾರವಾಗಿ ಮಾತಿನ ಚಕಮಕಿ; ರೌಡಿಶೀಟರ್ ಹತ್ಯೆ, ಇಬ್ಬರ ಸ್ಥಿತಿ ಗಂಭೀರ

ಸಾಂದರ್ಭಿಕ ಚಿತ್ರ
ಮಂಡ್ಯ : ಯುವಕರ ಜಗಳ ವಿಕೋಪಕ್ಕೆ ತಿರುಗಿ ರೌಡಿಶೀಟರ್ ಭೀಕರ ಹತ್ಯೆಯಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ನಗರದಲ್ಲಿ ರವಿವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ.
ಘಟನೆಯಲ್ಲಿ ಮೂಲತಃ ಮದ್ದೂರು ತಾಲೂಕು ಮರಳಿಗ ಗ್ರಾಮದ ಹಾಲಿ ಮದ್ದೂರಿನ ಸೋಮೇಗೌಡರ ಬೀದಿ ನಿವಾಸಿ ರೌಡಿಶೀಟರ್ ಯಶ್ವಂತ್ ಅಲಿಯಾಸ್ ಕಚ್ಚಿ(21) ಹತ್ಯೆಯಾಗಿದ್ದು, ಮದ್ದೂರು ತಾಲೂಕು ಗೊರವನಹಳ್ಳಿ ಗ್ರಾಮದ ದರ್ಶನ್ ಮತ್ತು ಸಚಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮದ್ದೂರು ನಗರದ ಹೊಳೆ ಆಂಜನೇಯಸ್ವಾಮಿ ದೇವಾಲಯ ರಸ್ತೆಯ ಪಟೇಲ್ ಸಾಮಿಲ್ ಬಳಿ ಈ ಘಟನೆ ನಡೆದಿದೆ. ಸಿಗರೇಟ್ ಹಂಚಿಕೊಳ್ಳುವ ವಿಚಾರವಾಗಿ ಮಾತಿನ ಚಕಮಕಿ ನಡೆದು, ಅದು ವಿಕೋಪಕ್ಕೆ ತಿರುಗಿ ಸಾಮಿಲ್ನಲ್ಲಿದ್ದ ಮರದ ತುಂಡುಗಳಿಂದ ಪರಸ್ಪರ ಹಲ್ಲೆ ನಡೆಯಿತು ಎನ್ನಲಾಗಿದೆ.
ರೌಡಿಶೀಟರ್ ಯಶ್ವಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ದರ್ಶನ್ ಹಾಗೂ ಸಚಿನ್ ಅವರನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಅವರ ಪರಿಸ್ಥಿತಿ ಚಿಂತಾಜನಕವಾಗಿ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಯಶವಂತ್ಕುಮಾರ್, ಇತರೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವಹಿಸಿದ್ದಾರೆ.






