Mandya | ಕಾಂಗ್ರೆಸ್ ಪಕ್ಷದಿಂದ ಮುಸ್ಲಿಮ್ ನಾಯಕರ ವಿರುದ್ಧ ಕ್ರಮ; ಧರ್ಮಗುರುಗಳ ಆಕ್ರೋಶ

ಮಂಡ್ಯ : ದಾವಣಗೆರೆ ವಿಧಾಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಹಾಗೂ ನಸೀರ್ ಅಹ್ಮದ್ ವಿರುದ್ಧ ಕಾಂಗ್ರೆಸ್ ತೆಗೆದುಕೊಂಡಿರುವ ಕ್ರಮಕ್ಕೆ ಜಿಲ್ಲೆಯ ಮುಸ್ಲಿಮ್ ಧರ್ಮಗುರುಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಜಾಮಿಯಾ ಮಸೀದಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮ್ ನಾಯಕರ ವಿರುದ್ಧದ ಕ್ರಮವನ್ನು ಹಿಂಪಡೆಯದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಸ್ಲಿಮ್ ಸಮುದಾಯದ ಮತಗಳೂ ಪ್ರಮುಖ ನಿರ್ಣಾಯಕ. ಶೇ.91ರಷ್ಟು ಮಂದಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಆದರೂ, ಕಾಂಗ್ರೆಸ್ ಹೈಕಮಾಂಡ್ ನಡೆದುಕೊಂಡಿರುವ ರೀತಿ ಬೇಸರ ತಂದಿದೆ. ನಮಗೂ ಬೇರೆ ಪಕ್ಷಗಳ ಆಯ್ಕೆ ಇದೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು.
ನಮ್ಮವರಿಗೆ ಸಚಿವ ಸ್ಥಾನ ಕೊಡಬೇಕೆಂದು ನಾವು ಯಾವತ್ತೂ ಬ್ಲಾಕ್‌ಮೇಲ್ ರಾಜಕಾರಣ ಮಾಡಿಲ್ಲ. ದಾವಣಗೆರೆಯಲ್ಲಿ ಹಿಂದಿನಿಂದಲೂ ಶಾಮನೂರು ಶಿವಶಂಕರಪ್ಪ ಕುಟುಂಬದವರನ್ನು ಬೆಂಬಲಿಸಿದ್ದೇವೆ. ಈ ಬಾರಿ ನಮಗೊಂದು ಅವಕಾಶ ಕೊಡಿ ಅಂತಾ ಕೇಳಿದ್ದು ತಪ್ಪಾ? ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಹೈಕಮಾಂಡ್ ಮತ್ತು ನಾಯಕರು ಆಗಿರುವ ತಪ್ಪನ್ನು ಸರಿಪಡಿಸಿ ಮುಸ್ಲಿಮ್ ಸಮುದಾಯಕ್ಕೆ ನ್ಯಾಯ ಕೊಡಬೇಕು. ಇಲ್ಲವಾದರೆ, ಮುಂದಿನ ಚುನಾವಣೆಗಳಲ್ಲಿ ಮುಸ್ಲಿಮ್ ಸಮುದಾಯದ ವಿರೋಧ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಧರ್ಮಗುರುಗಳಾದ ಮೌಲಾನ ಹಾಮಿದುಲ್ ಹಸನ್ ರಶಾದಿ, ಮುಫ್ತಿ ರಿಜ್ವಾನ್ ಅಹ್ಮ್ಮದ್ ಖಸ್ಮಿ, ಮೌಲಾನ ಅಮ್ಜದ್ ಅಲಿ ಖಾನ್, ಮುಫ್ತಿ ಒವೈಸ್ ಖರ್ನಿ ಖಾಸ್ಮಿ, ಮೌಲಾನ ಝಬೀವುಲ್ಲಾ ಇಮಾಮ್, ಹಾಫೀಜ್ ಸೈಯ್ಯದ್ ಅಹ್ಮದ್ ಪಾಷ, ಹಾಫೀಜ್ ಇಮ್ರಾನ್ ಪಾಷ, ಮುಫ್ತಿ ಇಮ್ದಾದ್ ಉಲ್ಲಾ ಉಪಸ್ಥಿತರಿದ್ದರು.






