Mandya | ಪತ್ನಿಯನ್ನು ಕೊಲೆಗೈದಿದ್ದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಸಾಂದರ್ಭಿಕ ಚಿತ್ರ | PC : freepik
ಮಂಡ್ಯ : ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ್ದ ವ್ಯಕ್ತಿಗೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಮೂಲತಃ ರಾಮನಗರ ಪಟ್ಟಣ ಎಕ್ಸ್ಟೆನ್ಷನ್ ಲೇಔಟ್ ನಿವಾಸಿ, ಹಾಲಿವಾಸ ಮಳವಳ್ಳಿ ತಾಲೂಕು, ಧನಗೂರು ಗ್ರಾಮದ ನಿವಾಸಿ ಅಜ್ಮಲ್ ಖಾನ್ (39) ಶಿಕ್ಷೆಗೆ ಗುರಿಯಾಗಿರುವ ಆರೋಪಿ.
ಅಜ್ಮಲ್ ಖಾನ್ 2005 ಜನವರಿ 1ರಂದು ಸಲ್ಮಾ ಬೇಗಂ ಅವರನ್ನು ಮದುವೆಯಾಗಿದ್ದು, ಮೂರು ವರ್ಷಗಳ ಸಂಸಾರ ಅನ್ನೋನ್ಯವಾಗಿತ್ತು. ತದನಂತರ ಆರೋಪಿಯು ಸಲ್ಮಾ ಬೇಗಂ ಅವರ ಶೀಲ ಶಂಕಿಸಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಸದರಿ ವಿಚಾರವನ್ನು ಸಲ್ಮಾ ಬೇಗಂ ತನ್ನ ತಂದೆ, ಸಹೋದರರು ಮತ್ತು ಸಹೋದರಿಗೆ ತಿಳಿಸುತ್ತಿದ್ದು, ಅವರು ಸಲ್ಮಾ ಬೇಗಂಗೆ ಧೈರ್ಯ ಹೇಳಿ ಅನುಸರಿಸಿಕೊಂಡು ಜೀವನ ಮಾಡು ಎಂದು ಹೇಳಿದ್ದರು. ಆದರೂ ಆರೋಪಿಯು ಆಕೆಗೆ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಅಬ್ದುಲ್ ಜಬ್ಬಾರ್ ಮನೆಯಲ್ಲಿ ತನ್ನ ಮಗುವಿನ ಜತೆ ಸಲ್ಮಾ ಬೇಗಂ ವಾಸವಿದ್ದಳು. 2023 ಮೇ 8ರಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ತನ್ನ ಮತ್ತೊಬ್ಬ ಮಗನ ಜೊತೆಗೆ ಅಲ್ಲಿಗೆ ಬಂದ ಅಜ್ಮಲ್ ಖಾನ್, ಮಗನ ಜೊತೆ ಸೇರಿಕೊಂಡು ಉಸಿರು ಕಟ್ಟಿಸಿ ಸಲ್ಮಾ ಬೇಗಂ ಅವರನ್ನು ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಸಯೀದುನ್ನಿಸಾ ಅವರು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಭಿಯೋಜನೆಯ ಪರವಾಗಿ ಸರಕಾರಿ ಅಭಿಯೋಜಕ ನಾಗರಾಜ ಕೆ. ಅವರು ವಾದ ಮಂಡಿಸಿದ್ದರು.






