Mandya | ಬಾಲಗರ್ಭಿಣಿಯರಿಗೆ ಕಾನೂನುಬಾಹಿರವಾಗಿ ಸ್ಕ್ಯಾನಿಂಗ್ ಪ್ರಕರಣ; ಮೂವರು ವೈದ್ಯರ ಬಂಧನ

ಸಾಂದರ್ಭಿಕ ಚಿತ್ರ | PC : Gemini AI
ಮಂಡ್ಯ: ಕೆ.ಆರ್.ಪೇಟೆಯ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ 31 ಬಾಲಗರ್ಭಿಣಿಯರಿಗೆ ಕಾನೂನುಬಾಹಿರವಾಗಿ ಸ್ಕ್ಯಾನಿಂಗ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಖಾಸಗಿ ವೈದ್ಯರನ್ನು ಮಂಗಳವಾರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೆ.ಆರ್.ಪೇಟೆಯ ಚೇತನಾ ಮೆಟರ್ನಿಟಿ ಸೆಂಟರ್ನ ಡಾ.ದಿವ್ಯಚೇತನ, ನಾವಿ ಡಯಾಗ್ನೋಸ್ಟಿಕ್ ಸೆಂಟರ್ನ ಡಾ.ಹರ್ಷಿತ್ ಮತ್ತು ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್ನ ಡಾ.ಹರೀಶ್ ಬಂಧಿತ ವೈದ್ಯರು. ಸರಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಪ್ರಿಯಾಂಕಾ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಇತ್ತೀಚೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಕೆ.ಆರ್.ಪೇಟೆ ಪಟ್ಟಣದ ಎರಡು ಡಯಾಗ್ನೋಸ್ಟಿಕ್ ಸೆಂಟರ್ಗಳಲ್ಲಿ ಬಾಲಗರ್ಭಿಣಿಯರಿಗೆ ಕಾನೂನುಬಾಹಿರವಾಗಿ ಲಿಂಗ ಪರೀಕ್ಷೆ ಮಾಡಿರುವುದು ಬೆಳಕಿಗೆ ಬಂದಿತ್ತು. ಅದರ ಬೆನ್ನಲ್ಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪಿ.ಎಸ್.ಆಶಾ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರಶ್ಮಿ ಅವರು ಹಲವು ಡಯಾಗ್ನೋಸ್ಟಿಕ್ ಸೆಂಟರ್ಗಳನ್ನು ಪರಿಶೀಲಿಸಿ ಕೆ.ಆರ್.ಪೇಟೆ ಪಟ್ಟಣ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದರು.
ನಾವಿ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ 2024ನೇ ಸಾಲಿನಲ್ಲಿ 19 ಮತ್ತು 2025ನೇ ಸಾಲಿನಲ್ಲಿ 5 ಸೇರಿದಂತೆ ಒಟ್ಟು 24 ಬಾಲಗರ್ಭಿಣಿಯರಿಗೆ ಹಾಗೂ ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ 7 ಬಾಲಗರ್ಭಿಣಿಯರಿಗೆ ಸ್ಯಾನಿಂಗ್ ಮಾಡಿರುವ ಆರೋಪ ಇದೆ.
ಈ ನಡುವೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲೆಯಲ್ಲಿರುವ 63 ಅಲ್ಟ್ರಾ್ರಸೌಂಡ್ ಸ್ಯಾನಿಂಗ್ ಸೆಂಟರ್ಗಳನ್ನು ತಪಾಸಣೆಗೆ ತಾಲೂಕು ಜಾಗೃತಿ ಸಮಿತಿಗಳನ್ನು ರಚಿಸಿ 10 ದಿನದೊಳಗೆ ವರದಿ ಸಲ್ಲಿಸಲು ಸಮಿತಿಗಳಿಗೆ ಸೂಚಿಸಿದ್ದಾರೆ. ಈ ಸಮಿತಿಗೆ ತಹಶೀಲ್ದಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.






