Mandya | ದೋಣಿ ಮುಳುಗಿ ಕೇರಳ ಮೂಲದ ದಂಪತಿ ಮೃತ್ಯು

ಮಂಡ್ಯ : ಪ್ರತ್ಯೇಕ ಘಟನೆಯಲ್ಲಿ ಬಿರುಗಾಳಿಗೆ ದೋಣಿ ಮಗುಚಿ ಕೇರಳ ಮೂಲದ ಇಬ್ಬರು ಪ್ರವಾಸಿಗರು ಮತ್ತು ಸ್ಥಳೀಯ ಯುವಕ ಕಾವೇರಿ ನದಿಯಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ವರದಿಯಾಗಿದೆ.
ಘಟನೆಯಲ್ಲಿ ಕೊಚ್ಚಿನ್ ಮೂಲದ ಮಂಜುನಾಥ್ (72), ಜಸ್ವಿ ಮಂಜುನಾಥ್(70) ಹಾಗೂ ಸ್ಥಳೀಯರಾದ ಈಶ್ವರ ಎಂಬುವರ ಪುತ್ರ ಮಧು(25) ಮೃತಪಟ್ಟಿದ್ದಾರೆ. ಈ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಘಟನೆ ವಿವರ:
ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿ ಬಳಿಯ ಖಾಸಗಿ ರೆಸಾರ್ಟ್ಗೆ ಆಗಮಿಸಿದ್ದ ಕೇರಳದ ಕೊಚ್ಚಿನ್ ಮೂಲದ ನಿವಾಸಿಗಳು ಕೆಆರ್‌ಎಸ್ ಹಿನ್ನೀರಿನಲ್ಲಿ ಬೋಟಿಂಗ್ ಮಾಡುವ ಸಂದರ್ಭದಲ್ಲಿ ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ ಬೋಟ್ ಮಗುಚಿ ನೀರಿನಲ್ಲಿ ಮುಳಗಿ ದಂಪತಿ ಮಂಜುನಾಥ್, ಜಸ್ವಿ ಮಂಜುನಾಥ್ ಮೃತಪಟ್ಟಿದ್ದಾರೆ. ಮೃತರ ಮಗಳು ಶ್ವೇತ, ಅಳಿಯ ಜಸ್ವಿನ್ ಹಾಗೂ ಪುತ್ರ ಅಯ್ಯನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೂಲತಃ ಕೇರಳದ ಕೊಚ್ಚಿ ನಿವಾಸಿಗಳಾದ ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಬೇಸಗೆ ರಜೆ ಹಿನ್ನೆಲೆಯಲ್ಲಿ ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿ-ಅಂತನಹಳ್ಳಿ ಸಮೀಪ ಇರುವ ಆರ್‌ಎಂಎಸ್‌ಸಿ ರೆಸಾರ್ಟ್ ಗೆ ಬಂದಿದ್ದರು ಎನ್ನಲಾಗಿದೆ.
ಶುಕ್ರವಾರ ಸಂಜೆ ಕೆಆರ್‌ಎಸ್ ಹಿನ್ನೀರಿನಲ್ಲಿ ಕುಟುಂಬ ಸಮೇತವಾಗಿ ಬೋಟಿಂಗ್ ಮಾಡುತ್ತಿರುವಾಗ ಬಿರುಗಾಳಿ ಸಹಿತ ಭಾರಿ ಮಳೆಗೆ ಬೋಟ್ ಮಗುಚಿ ಐವರೂ ನೀರಿನಲ್ಲಿ ಮುಳುಗಿದ್ದಾರೆ. ತಕ್ಷಣ ಮತ್ತೊಂದು ಬೋಟ್ನಲ್ಲಿ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಹೊರಗೆ ತರಲಾಯಿತು.
ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲೇ ವಿ.ಮಂಜುನಾಥ್, ಪತ್ನಿ ಜಸ್ವಿ ಮೃತಪಟ್ಟಿದ್ದರು.
ಮತ್ತೊಂದು ಪ್ರಕರಣದಲ್ಲಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಗಿರಿಯಾರಹಳ್ಳಿ ಗ್ರಾಮದ ಈಶ್ವರ ಎಂಬುವರ ಪುತ್ರ ಮಧು ದೋಣಿ ಮೊಗುಚಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಈತನ ಮೃತ ದೇಹಕ್ಕಾಗಿ ಅಗ್ನಿಶಾಮಕ ದಳ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆ.ಆರ್.ಎಸ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






