Mandya | ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹ ತಂದಾಗ ಆಸ್ಪತ್ರೆಯಲ್ಲಿ ಸಿಬ್ಬಂದಿಯೇ ಇರಲಿಲ್ಲ! : ಸಾರ್ವಜನಿಕರ ತೀವ್ರ ಆಕ್ರೋಶ

ಮಂಡ್ಯ : ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ(ಭಾರತಿ ನಗರ) ಸರಕಾರಿ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಓರ್ವ ನರ್ಸ್ ಕೂಡ ಇಲ್ಲದಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆ ತಂದಾಗ ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಯಾವುದೇ ಸಿಬ್ಬಂದಿ ಇಲ್ಲದಿರುವುದನ್ನು ಕಂಡು ಸಾರ್ವಜನಿಕರು ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಪ್ರಶ್ನಿಸಿದ ಬಗ್ಗೆ ತಿಳಿದು ಬಂದಿದೆ.
ಘಟನೆ ಹಿನ್ನೆಲೆ:
ಮದ್ದೂರು ಮಳವಳ್ಳಿ ರಾಜ್ಯ ಹೆದ್ದಾರಿಯ ಹುಣ್ಣನದೊಡ್ಡಿ ಗ್ರಾಮದಲ್ಲಿ ಗ್ರಾಮದ ಪ್ರಕಾಶ್ (50) ಎಂಬುವವರು ಅಪರಿಚಿತ ವಾಹನ ಢಿಕ್ಕಿಯಾಗಿ ಸುಮಾರು ರಾತ್ರಿ 7:00 ಸಮಯದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗ್ರಾಮಸ್ಥರು ತಕ್ಷಣ ಮೃತದೇಹವನ್ನು ಭಾರತಿ ನಗರದ ಸಮುದಾಯ ಆಸ್ಪತ್ರೆಗೆ ತಂದಿದ್ದಾರೆ.
ಆ ಸಮಯದಲ್ಲಿ ಆಸ್ಪತ್ರೆ ತೆರೆದಿದ್ದರೂ ವೈದ್ಯರು ಸರಿದಂತೆ ಓರ್ವ ನರ್ಸ್ ಕೂಡ ಇಲ್ಲದಿರುವ ಬಗ್ಗೆ ಗ್ರಾಮಸ್ಥರುತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಸಂದರ್ಭದಲ್ಲಿ ತುರ್ತಾಗಿ ರೋಗಿಗಳನ್ನು ಆಸ್ಪತ್ರೆಗೆ ತಂದಾಗ ವೈದ್ಯರೇ ಇಲ್ಲದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಸ್ಥಳಕ್ಕಾಗಮಿಸಿದ ಪೋಲಿಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಮುದಾಯ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿ ಗೈರಾಗಿರುವ ವೈದ್ಯರು, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅಗತ್ಯವಿರುವ ವೈದ್ಯರು ಮತ್ತು ಸಿಬ್ಬಂದಿಯನ್ನು ಕೂಡಲೇ ನೇಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.






