ಮಂಡ್ಯ ಕಾರಾಗೃಹದಲ್ಲಿ ಕರ್ತವ್ಯಲೋಪ ಆರೋಪ; ಎಂ.ಶಾಂತಮ್ಮ ವರ್ಗಾವಣೆ

ಮಂಡ್ಯ : ‘ಲಂಚ ಕೊಟ್ಟರೆ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ಬಂದಿಗಳಿಗೆ ರಾಜ್ಯಾತಿಥ್ಯ ಸಿಗುತ್ತದೆ’ ಎಂದು ಕೈದಿಗಳು ಆರೋಪಿಸಿರುವ ಪತ್ರ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾರಾಗೃಹ ಅಧೀಕ್ಷಕಿ ಎಂ.ಶಾಂತಮ್ಮ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ.
ಶಾಂತಮ್ಮ ಅವರ ಕರ್ತವ್ಯಲೋಪ ಮೇಲ್ನೋಟಕ್ಕೆ ಕಂಡು ಬಂದಿದೆ. ಡಿಐಜಿ ಅವರಿಂದ ಸಮಗ್ರ ವಿಚಾರಣಾ ವರದಿ ಸ್ವೀಕೃತವಾಗುವವರೆಗೆ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ಮುಂದುವರಿಸುವುದು ಸೂಕ್ತವಲ್ಲ. ಹೀಗಾಗಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವಿಶೇಷ ಕರ್ತವ್ಯದ ಮೇಲೆ ನಿಯೋಜಿಸಲಾಗಿದೆ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ಕುಮಾರ್ ಆದೇಶ ಹೊರಡಿಸಿದ್ದಾರೆ.
ಭೂ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಕಾರಾಗೃಹದಲ್ಲಿದ್ದ ಎಡಿಎಲ್‌ಆರ್ ಮುಹಮ್ಮದ್ ಹುಸೇನ್, ಚಿಕಿತ್ಸೆ ಪಡೆಯುವ ನೆಪದಲ್ಲಿ ಮಿಮ್ಸ್ ಆಸ್ಪತ್ರೆಯಲ್ಲಿ ಗೆಳತಿ ಜತೆ ಇದ್ದಾಗ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ತಂಡಕ್ಕೆ ಈಚೆಗೆ ಸಿಕ್ಕಿಬಿದ್ದಿದ್ದರು.
ಈ ಪ್ರಕರಣದ ನಂತರ, ಲಂಚ ನೀಡಿದರೆ ಕಾರಾಗೃಹದಲ್ಲಿ ರಾಜಾತಿಥ್ಯ ಸಿಗುತ್ತದೆ ಎಂದು ಕೈದಿಗಳು ಆರೋಪಿಸಿರುವ ಪತ್ರ ವೈರಲ್ ಆಗಿತ್ತು.




