Mandya | ವಿವಾಹಿತೆ, ಯುವಕ ರೈಲಿಗೆ ಸಿಲುಕಿ ಮೃತ್ಯು

ಸಾಂದರ್ಭಿಕ ಚಿತ್ರ (PC: Meta AI)
ಮಂಡ್ಯ : ವಿವಾಹಿತೆ ಮತ್ತು ಅವಿವಾಹಿತ ಯುವಕ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ವಿ.ಸಿ.ಫಾರಂ ರೈಲ್ವೆ ಗೇಟ್ ಸಮೀಪ ಶುಕ್ರವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಬೆಂಗಳೂರಿನ ಮಾದನಾಯಕನಹಳ್ಳಿ ನಿವಾಸಿ ವೀರೇಶ್ ಪತ್ನಿ ಸಹನಾ ಹಾಗೂ ಯುವಕ ರಾಹುಲ್ (23) ಸಾವನ್ನಪ್ಪಿದ್ದು, ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸಹನಾ, ವರ್ಷಗಳ ಹಿಂದೆ ಆಟೊರಿಕ್ಷಾ ಚಾಲಕ ವೀರೇಶ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ದಂಪತಿಗೆ ಆರು ವರ್ಷದ ಹೆಣ್ಣು ಮಗು ಹಾಗೂ ಎರಡು ವರ್ಷದ ಗಂಡು ಮಗುವಿದೆ ಎಂದು ತಿಳಿದು ಬಂದಿದೆ.
ವೀರೇಶ್ ಸಹನಾ ದಂಪತಿ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ವಾಸವಿದ್ದ ಕುಟುಂಬದ ಕಟ್ಟಡದಲ್ಲೇ ನೆಲೆಸಿದ್ದ ರಾಹುಲ್ ಜೊತೆ ಸಹನಾಗೆ ಆತ್ಮೀಯತೆ ಬೆಳೆದು ಪ್ರೀತಿಗೆ ತಿರುಗಿತ್ತು. ಈ ವಿಚಾರವಾಗಿ ಗಂಡ ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ.
ಸಮಸ್ಯೆ ಬಗೆಹರಿಸಲು ಹಿರಿಯರ ಸಮ್ಮುಖದಲ್ಲಿ ಹಲವು ಬಾರಿ ನ್ಯಾಯ ಪಂಚಾಯಿತಿಯೂ ನಡೆದಿತ್ತು. ಸೋಮವಾರ ಇದೇ ವಿಚಾರವಾಗಿ ದಂಪತಿ ನಡುವೆ ತೀವ್ರ ವಾಗ್ವಾದ ನಡೆದು, ಮಂಗಳವಾರ ಸಹನಾ ಬೆಂಗಳೂರಿನ ಮನೆಯಿಂದ ಹೊರಟು ಮಂಡ್ಯ ತಾಲೂಕಿನ ಗುನ್ನಾಯಕನಹಳ್ಳಿಯ ಅಜ್ಜಿ ಮನೆಗೆ ಬಂದಿದ್ದರು. ಗುರುವಾರ ರಾಹುಲ್ ಕೂಡ ಅಲ್ಲಿಗೆ ಬಂದಿದ್ದ ಎಂದು ವರದಿಯಾಗಿದೆ.
ಈ ಸಂಬಂಧ ಮಂಡ್ಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






