Mandya | ಕೊಲೆಯಾಗಿದ್ದಾಳೆ ಎನ್ನಲಾಗಿದ್ದ ಮಹಿಳೆ ಪ್ರತ್ಯಕ್ಷ

ಮಂಡ್ಯ : ಹತ್ಯೆಯಾಗಿದ್ದಾಳೆ ಎನ್ನಲಾಗಿದ್ದ ಪಾಂಡವಪುರದ ಮಹಿಳೆ ಆರು ವರ್ಷಗಳ ನಂತರ ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿ ಗ್ರಾಮದಲ್ಲಿ ಬುಧವಾರ ಜೀವಂತವಾಗಿ ಪತ್ತೆಯಾಗಿರುವುದು ವರದಿಯಾಗಿದೆ.
ಪಾಂಡವಪುರ ಪಟ್ಟಣದ ಹಿರೋಡೆ ಬೀದಿ ನಿವಾಸಿ ನಾಗರಾಜು ಎಂಬವರ ಪುತ್ರಿ ಎನ್.ಮಂಜು (35) ಪತ್ತೆಯಾದ ಮಹಿಳೆಯಾಗಿದ್ದು, ಪೊಲೀಸರು ಆಕೆಯನ್ನು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಮಂಜುವನ್ನು ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರಿಂದ ಬಂಧಿತರಾಗಿದ್ದ ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ರಾಜೇಶ ಎಂ.ಆರ್. ಅಲಿಯಾಸ್ ಕಾಳ ಎಂಬಾತ ಎರಡು ವರ್ಷ ಜೈಲುವಾಸ ಅನುಭವಿಸಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ತನಗಿಷ್ಟವಿಲ್ಲದ ಮದುವೆ ಮಾಡಿದ್ದರಿಂದ ಮನೆಬಿಟ್ಟು ಓಡಿಹೋಗಿ ಪ್ರಿಯಕರನಾದ ಚಾಮರಾಜನಗರದ ನಾಗೇಂದ್ರ ಅವರನ್ನು ವಿವಾಹವಾದೆ. ಒಂದು ವರ್ಷ ತಮಿಳುನಾಡಿನಲ್ಲಿ ವಾಸವಿದ್ದು, ಬಳಿಕ ಮಾಯಿಗೋನಹಳ್ಳಿಗೆ ಬಂದು ವಾಸ ಮಾಡುತ್ತಿದ್ದೇವೆ. ನನ್ನ ತಂದೆ ನಾಪತ್ತೆ ಮತ್ತು ಕೊಲೆ ಪ್ರಕರಣ ದಾಖಲಿಸಿರುವುದು ಗೊತ್ತಿಲ್ಲ. ಕೊಲೆ ಆರೋಪ ಹೊತ್ತ ರಾಜೇಶನಿಂದ ನನಗೆ ಯಾವುದೇ ತೊಂದರೆಯಾಗಿಲ್ಲ ಎಂದು ಮಂಜು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ: ಪಾಂಡವಪುರ ಪಟ್ಟಣದ ಹಿರೋಡೆ ಬೀದಿ ನಿವಾಸಿ ನಾಗರಾಜು ಎಂಬವರ ಪುತ್ರಿ ಮಂಜು ಅವರನ್ನು ಶ್ರೀರಂಗಪಟ್ಟಣ ತಾಲೂಕಿನ ನೀಲನಕೊಪ್ಪಲು ಗ್ರಾಮದ ಮಂಜುನಾಥ್ ಅವರಿಗೆ ಮದುವೆ ಮಾಡಲಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ 2019ರ ಮೇ ತಿಂಗಳಲ್ಲಿ ಮಂಜು ಗಂಡನ ಮನೆ ತೊರೆದು ತಂದೆಯ ಮನೆಗೆ ಬಂದು ವಾಸವಿದ್ದಳು.
2019ರ ಜೂನ್ 23ರಂದು ರಾತ್ರಿ ನಾಗರಾಜು ’ಸೆಕ್ಯುರಿಟಿ’ ಕೆಲಸಕ್ಕೆ ತೆರಳಿದ್ದಾಗ ಮಂಜು ನಾಪತ್ತೆಯಾಗಿದ್ದರು. ಜುಲೈ 3ರಂದು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪುತ್ರಿ ಕಾಣೆಯಾಗಿದ್ದಾಳೆ ಎಂದು ತಂದೆ ನಾಗರಾಜು ದೂರು ದಾಖಲಿಸಿದ್ದರು.
ಈ ನಡುವೆ, ತನ್ನ ಮಗಳ ಜೊತೆ ಆತ್ಮೀಯನಾಗಿದ್ದ ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ರಾಜೇಶ, ತನ್ನ ಪುತ್ರಿಯನ್ನು 2021ರ ಜು.23ರಂದು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ಕಾವೇರಿ ನದಿಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮಂಜು ತಂದೆ ನಾಗರಾಜು ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ನಾಪತ್ತೆ ಪ್ರಕರಣ ಕೊಲೆ ಪ್ರಕರಣವಾಗಿ ಬದಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ರಾಜೇಶನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಮಂಜು ಜೀವಂತ ಪತ್ತೆ ಆದ ಹಿನ್ನೆಲೆಯಲ್ಲಿ ನಿರಾಪರಾಧಿಯಾದ ತನ್ನ ಮಗನನ್ನು ರಕ್ಷಿಸಿ, ಆತನಿಗೆ ನ್ಯಾಯ ದೊರಕಿಸಿಕೊಡುವಂತೆ ಕೋರಿ ರಾಜೇಶನ ತಂದೆ ರಮೇಶ್ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.






