Mandya | ನಾಪತ್ತೆಯಾಗಿದ್ದ ಯುವ ಗುತ್ತಿಗೆದಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಮಂಡ್ಯ: ಮೂರು ದಿನಗಳಿಂದ ಕಾಣೆಯಾಗಿದ್ದ ಶ್ರೀರಂಗಪಟ್ಟಣ ತಾಲೂಕು ಹುಣಸನಹಳ್ಳಿ ಗ್ರಾಮದ ಯುವ ವಿದ್ಯುತ್ ಗುತ್ತಿಗೆದಾರರೊಬ್ಬರ ಮೃತದೇಹ ಶ್ರೀರಂಗಪಟ್ಟಣ ಬಳಿಯ ಕಾವೇರಿ ನದಿಯಲ್ಲಿ ಸೋಮವಾರ ಪತ್ತೆಯಾಗಿದೆ.
ಹುಣಸನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಎಂಬವರ ಪುತ್ರ ಪವನ್ ಎಚ್.ಪಿ. (28) ಮೃತಪಟ್ಟವರು. ಅವರ ಮೃತದೇಹ ಶ್ರೀರಂಗಪಟ್ಟಣ ಸಮೀಪದ ಗಂಜಾಂ ಬಳಿ ಕಾವೇರಿ ನದಿ ಮೇಲ್ವೇತುವೆ ಕೆಳಗೆ ಪತ್ತೆಯಾಗಿದೆ. ಪವನ್ ಅವರ ಬೈಕ್ ಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ಕಂಡು ಬಂದಿದೆ.
ಪವನ್ ವೆಲ್ಲೆಸ್ಲಿ ಸೇತುವೆ ಬಳಿ ನದಿಗೆ ಹಾರಿರುವ ಸಾಧ್ಯತೆ ಇದ್ದು, ಒಂದು ಕಿ.ಮೀ. ದೂರದಲ್ಲಿ ಮೃತದೇಹ ಸಿಕ್ಕಿದೆ. ಮೃತದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಪವನ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಅವರ ಪೋಷಕರು ಪೊಲೀಸ್ ದೂರು ನೀಡಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಯು.ಡಿ.ಕೃಷ್ಣಕುಮಾರ್, ಸಿಪಿಐ ಬಿ.ಜಿ. ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಂಚನಾಮೆ ನಡೆಸಿದ ಬಳಿಕ ಮೃತದೇಹವನ್ನು ಸೋಮವಾರ ವಾರಸುದಾರರಿಗೆ ಒಪ್ಪಿಸಲಾಗಿದೆ.
ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.




