ಬ್ರಾಹ್ಮಣ-ಶ್ರಮಣ ಸಂಘರ್ಷದ ಮುಂದುವರಿದ ಭಾಗ ಬಾಡೂಟದ ಹೋರಾಟ: ಚಿಂತಕ ಶಿವಸುಂದರ್

ಮಂಡ್ಯ: ಬ್ರಾಹ್ಮಣ ಸಂಸ್ಕೃತಿ ಮತ್ತು ಶ್ರಮಣ ಸಂಸ್ಕೃತಿ ನಡುವೆ ಈ ದೇಶದ ನಾಗರಿಕತೆಯ ಉದ್ದಕ್ಕೂ ಸಂಘರ್ಷ ನಡೆದಿದೆ. ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬಾಡೂಟಕ್ಕಾಗಿ ನಡೆದ ಹೋರಾಟವು ಆ ಸಂಘರ್ಷದ ಮುಂದುವರಿದ ಭಾಗ ಎಂದು ಚಿಂತಕ ಶಿವಸುಂದರ್ ಅಭಿಪ್ರಾಯಪಟ್ಟಿದ್ದಾರೆ.
ಮಂಡ್ಯದ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟಕ್ಕೂ ನಡೆಸಿದ ಹೋರಾಟಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಬಾಡೂಟ ಬಳಗವು ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ‘ಸಾಹಿತ್ಯ ಸಮ್ಮೇಳನದಲ್ಲಿ ಮಂಡ್ಯ ಮುನ್ನುಡಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶದ ಬಹುಸಂಖ್ಯಾತರು ಶೂದ್ರರು, ದಲಿತರ, ಮಹಿಳೆಯರ ಮತ್ತು ಸಾಂಸ್ಕೃತಿಕ ರಾಜಕೀಯದ ದಿಗ್ವಿಜಯ ಆಗುವತನಕ ಈ ಹೋರಾಟ ಮುಂದುವರಿಸಬೇಕು ಎಂದು ಕರೆ ನೀಡಿದರು.
ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ಆಳುವುದು ಸಹಜ ಪ್ರಕ್ರಿಯೆ. ಆದರೆ, ಇತಿಹಾಸದುದ್ದಕ್ಕೂ ಅಲ್ಪಸಂಖ್ಯಾತರೇ ಬಹುಸಂಖ್ಯಾತರನ್ನು ಆಳುತ್ತ ಬಂದಿದ್ದಾರೆ. ಅದಕ್ಕೆ ಅವರು ಬಳಸುತ್ತಿರುವ ದೊಡ್ಡ ಆಯುಧವೆಂದರೆ ಸಾಂಸ್ಕೃತಿಕ ರಾಜಕಾರಣ. ಅದರಲ್ಲಿ ಆಹಾರ ಸಂಸ್ಕೃತಿಯೂ ಬಹಳ ಮುಖ್ಯವಾದುದು. ಬಹುಸಂಖ್ಯಾತರನ್ನು ರಾಜಕೀಯವಾಗಿ ಅಧೀನಗೊಳಿಸಿಕೊಳ್ಳುವುದು ಇದರ ಬಹುದೊಡ್ಡ ಕುತಂತ್ರ ಎಂದು ಅವರು ವಿಶ್ಲೇಷಿಸಿದರು.
ಮಾಂಸಹಾರ ತಿನ್ನುವುದು ಕೀಳು ಎನ್ನುವುದರ ಮೂಲಕ ಅವರು ಮಾಡಿದ್ದು ಕೇವಲ ಆಹಾರದ ರಾಜಕಾರಣ ಅಲ್ಲ. ಇಡೀ ದೊಡ್ಡ ಸಮುದಾಯವನ್ನು ತಮ್ಮ ಅಧೀನರನ್ನಾಗಿ ಮಾಡಿ ಶಾಶ್ವತವಾಗಿ ತಮ್ಮ ರಾಜಕೀಯ ಅಧಿಕಾರ ಸ್ಥಾಪಿಸುವುದಾಗಿದೆ. ಆದ್ದರಿಂದ ಇದು ಕೇವಲ ಆಹಾರದ ಪ್ರಶ್ನೆಯಲ್ಲ. ನಾಗರಿಕತೆಯ ಪ್ರಶ್ನೆ, ರಾಜಕೀಯದ ಪ್ರಶ್ನೆ. ಪ್ರಸ್ತುತ ಸಂದರ್ಭದಲ್ಲಿ ಇದು ಬಹುದೊಡ್ಡ ರೀತಿಯಲ್ಲಿ ಅಪ್ಪಳಿಸುತ್ತಾ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇವತ್ತು ನಾವಿರುವ ವ್ಯವಸ್ಥೆಯಲ್ಲಿ ಯಾವ ರೀತಿ ಆಕ್ರಮ ಆಗುತ್ತಿದೆಯೆಂದರೆ, ಅದು ಕೇವಲ ಮುಸ್ಲಿಮರ ಮೇಲಲ್ಲ. ಮುಸ್ಲಿಮರ ಹೆಗಲ ಮೇಲೆ ಬಂದೂಕಿಟ್ಟು ಅವರು ಕೊಲ್ಲುತ್ತಿರುವುದು ರೈತರನ್ನು, ದಲಿತರನ್ನು. ಹಾಗೇನೆ ಇದರಲ್ಲಿ ಅನ್ಯಗೊಳಿಸುವುದು, ಅಧೀನಗೊಳಿಸುವುದು ಒಂದೇ ರಾಜಕಾರಣದ ಭಾಗ. ಬಹುಸಂಖ್ಯಾತರನ್ನು ರಾಜಕೀಯವಾಗಿ ಅಧೀನಗೊಳಿಸಿಕೊಳ್ಳುವುದು ಇದರ ಬಹುದೊಡ್ಡ ಕುತಂತ್ರ. ಸಾಹಿತ್ಯ ಮತ್ತು ಸಂಸ್ಕೃತಿ ಅದರಲ್ಲಿ ಬಹುದೊಡ್ಡ ಪಾತ್ರವಹಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.
ಹಿರಿಯ ಪತ್ರಕರ್ತ, ಸಾಹಿತಿ ರಘುನಾಥ ಚ.ಹ. ಮಾತನಾಡಿ, ಮಾಂಸಹಾರ ವಿರೋಧವು ಅಸ್ಪೃಶ್ಯತೆ ಆಚರಣೆಯ ಮುಂದುವರಿಕೆಯಾಗಿದೆ. ಪ್ರಸ್ತುತ ವ್ಯವಸ್ಥೆಯು ಮಾಂಸಹಾರಿಗಳನ್ನು ಅಪವಿತ್ರರು ಎಂದು ಬಿಂಬಿಸುವಂತಹ ಬೆಳವಣಿಗೆಯು ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು. ಈ ನಿಟ್ಟಿನಲ್ಲಿ ಮಾಂಸಹಾರ ವಿರೋಧದ ವಿರುದ್ಧ ಚಳವಳಿ ರಾಜ್ಯವ್ಯಾಪಿ ವಿಸ್ತರಿಸಬೇಕು ಎಂದು ಹೇಳಿದರು.
ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ, ಸಾಹಿತಿಗಳಾದ ಗುರುಪ್ರಸಾದ್ ಕಂಟಲಕೆರೆ, ಸಂತೋಷ್ ಗುಡ್ಡಿಯಂಗಡಿ, ಸಂಸ್ಕೃತಿ ಚಿಂತಕ ಉಗ್ರನರಸಿಂಹೇಗೌಡ, ವಕೀಲರಾದ ಬಿ.ಟಿ.ವಿಶ್ವನಾಥ್, ಜೀರಹಳ್ಳಿ ರಮೇಶ್‍ಗೌಡ, ಜೆ.ರಾಮಯ್ಯ, ಬಾಡೂಟ ಬಳಗದ ಅರವಿಂದಪ್ರಭು, ಶಿವಕುಮಾರ ಆರಾಧ್ಯ, ಕರವೇ ಎಚ್.ಡಿ.ಜಯರಾಂ, ಪ್ರೊ.ಹುಲ್ಕೆರೆ ಮಹದೇವ, ಎಂ.ಬಿ.ನಾಗಣ್ಣಗೌಡ, ಸಿ.ಕುಮಾರಿ, ಡಿ.ಕೆ.ಮಹೇಂದ್ರ, ಇತರರು ಉಪಸ್ಥಿತರಿದ್ದರು.
“ಸಾಹಿತ್ಯ ಸಮ್ಮೇಳನಗಳೆಲ್ಲವೂ ಕೋಸಂಬರಿ, ಮಜ್ಜಿಗೆಹುಳಿ, ಇತ್ಯಾದಿಯಾಗಿದ್ದ ಸಂದರ್ಭದಲ್ಲಿ ಬಾಡಿನ ಸಾಹಿತ್ಯ ಬರಬೇಕು ಎಂಬ ಹೋರಾಟವನ್ನು ಮಂಡ್ಯದ ಬಾಡೂಟ ಬಳಗವು ಕೈಗೆತ್ತಿಕೊಂಡಿರುವುದು ಮಹತ್ವದ ಬೆಳವಣಿಗೆ. ಈ ಚಳವಳಿ ಕೇವಲ ಸಾಹಿತ್ಯ ಸಮ್ಮೇಳನಕ್ಕೆ ಮಾತ್ರ ಸೀಮಿತವಾಗಬಾರದು. ತಮಗಿಷ್ಟ ಬಂದ ಆಹಾರ ಸೇವಿಸುವುದು ಸಂವಿಧಾನದ ಹಕ್ಕು. ಯಾವ ಕಾರಣಕ್ಕೂ ಮಾಂಸಹಾರ ನಿಷೇದ ಮಾಡಬಾರದು.”
-ಶಿವಸುಂದರ್, ಚಿಂತಕ.







