ಮಂಡ್ಯ| ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ: ವೈದ್ಯಕೀಯ ವರದಿ
ಅಪ್ರಾಪ್ತೆಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿದ್ದ ಬಾಲಕಿಯ ಚಿಕ್ಕಮ್ಮ

ಸಾಂದರ್ಭಿಕ ಚಿತ್ರ (credit: Grok)
ಮಂಡ್ಯ: ನಗರದ ಕೇಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಸರಕಾರಿ ಪ್ರಾಥಮಿ ಶಾಲೆಯ 2ನೇ ತರಗತಿ ಓದುತ್ತಿರುವ ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲವೆಂದು ವೈದ್ಯಕೀಯ ವರದಿ ಹೇಳಿದೆ.
ಕಳೆದ ಜ.31ರಂದು ಶಾಲೆಯ ಬಳಿ 8 ವರ್ಷದ ಈ ಬಾಲಕಿಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಬಾಲಕಿ ಚಿಕ್ಕಮ್ಮ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಪ್ರಕರಣವು ಜಿಲ್ಲೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು. ಇದೀಗ ಪ್ರಕರಣದ ತನಿಖೆ ಕೈಗೊಂಡಿರುವ ಸೆಂಟ್ರಲ್ ಠಾಣೆ ಪೊಲೀಸರು ಬಾಲಕಿ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ. ಹಲ್ಲೆಯಿಂದ ಗಾಯಗಳಾಗಿವೆ ಎಂಬುದು ವೈದ್ಯಕೀಯ ವರದಿ ದೃಢಪಡಿಸಿದೆ ಎಂದು ಹೇಳಿದ್ದಾರೆ.
ಪೋಕ್ಸೋ ಮತ್ತು ಜೆಜೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಮಿಕ್ಕೆರೆ ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.
ಪೋಕ್ಸೋ ಮತ್ತು ಜೆಜೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರೆ ಸಾಲದು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮಕ್ಕಳ ರಕ್ಷಣಾ ಸಮಿತಿ, ಪೊಲೀಸರು ಹಾಗೂ ಜಿಲ್ಲಾಡಳಿತವನ್ನು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಆಗ್ರಹಿಸಿದ್ದಾರೆ.
ಮತ್ತೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮುಖಂಡರಾದ ಪ್ರಸನ್ನಕುಮಾರ್, ಶಿವಲಿಂಗಯ್ಯ, ಶಿವಣ್ಣ, ನಂದೀಶ, ಎಲ್ಲೇಗೌಡ, ಸುರೇಶ್, ರಾಮಯ್ಯ ಎಎಸ್ಪಿ ಗಂಗಾಧರ್ ಅವರಿಗೆ ದೂರು ನೀಡಿ, ಪ್ರಕರಣವನ್ನು ಮುಚ್ಚಿಡುವ ಯತ್ನ ನಡೆಯುತ್ತಿದೆ. ಕೂಡಲೇ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.