ಮಂಡ್ಯ | ಚಿನ್ನಾಭರಣ ಮಳಿಗೆಯಿಂದ ದರೋಡೆ: ಕೃತ್ಯ ನೋಡಿದ ವ್ಯಕ್ತಿಯನ್ನು ಕೊಲೆಗೈದು ಪರಾರಿಯಾದ ಕಳ್ಳರು

ಮಂಡ್ಯ: ಚಿನ್ನಾಭರಣ ಮಳಿಗೆಯಿಂದ ದರೋಡೆಗೆ ಬಂದಿದ್ದ ಕಳ್ಳರು ತಮ್ಮ ಕೃತ್ಯವನ್ನು ನೋಡಿದ ವ್ಯಕ್ತಿಯೊಬ್ಬರನ್ನು ಕೊಲೆಗೈದು ಪರಾರಿಯಾದ ಆಘಾತಕಾರಿ ಘಟನೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಕಿರುಗಾವಲು ಗ್ರಾಮದ ಮಹದೇಶ್ವರ ಹೋಟೆಲ್ ಮಾಲಕ ಮಾದಪ್ಪ(75) ಕೊಲೆಯಾದವರು.
ಕಿರುಗಾವಲು ಗ್ರಾಮದ ಮುಖ್ಯರಸ್ತೆಯಲ್ಲಿರುವ ಮಹಾಲಕ್ಷ್ಮೀ ಜ್ಯುವೆಲರ್ಸ್ ಆಂಡ್ ಬ್ಯಾಂಕರ್ಸ್ ಗೆ ಶನಿವಾರ ತಡರಾತ್ರಿ 2 ಗಂಟೆ ವೇಳೆ ಕಳ್ಳರು ನುಗ್ಗಿದ್ದಾರೆ. ದರೋಡೆಕೋರರು ಜ್ಯುವೆಲ್ಲರಿಯ ಬಾಗಿಲನ್ನು ಗ್ಯಾಸ್ ಕಟ್ಟರ್ ನಿಂದ ಮುರಿದು ಒಳನುಗ್ಗಿದ್ದಾರೆ. ಇದೇವೇಳೆ ಶಬ್ದ ಕೇಳಿ ಪಕ್ಕದಲ್ಲಿರುವ ಮಹದೇಶ್ವರ ಹೋಟೇಲ್ ಮಾಲಕ ಮಾದಪ್ಪ ಹೊರಬಂದಿದ್ದಾರೆ. ದರೋಡೆಕೋರರು ಮಾದಪ್ಪರಿಗೆ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಚಿನ್ನಾಭರಣ ಮಳಿಗೆಯಿಂದ 150 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, ಹಿತ್ತಾಳೆ ಹಾಗೂ ಸುಮಾರು 30 ಸಾವಿರ ರೂ. ಮೌಲ್ಯದ ಕೃತಕ ಚಿನ್ನದ ಒಡವೆಗಳನ್ನು ದೋಚಿದ್ದಾರೆ. ಜೊತೆಗೆ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದ ಡಿವಿಆರ್ ಅನ್ನೂ ಕೊಂಡೊಯ್ದಿದ್ದಾರೆ ಎಂದು ಚಿನ್ನದ ಅಂಗಡಿ ಮಾಲಕ ಶೇಷರಾವ್ ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿ.ಕೃಷ್ಣಪ್ಪ, ಸಿಪಿಐ ಬಿ.ಎಸ್.ಶ್ರೀಧರ್, ಪಿಎಸ್ಸೈ ಡಿ.ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.







