ಮಂಡ್ಯ | ಶತಾಬ್ದಿ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ವಿದ್ಯಾರ್ಥಿನಿ ಮೃತ್ಯು
ರೈಲನ್ನು ಹತ್ತಿರದಿಂದ ನೋಡಲು ಯತ್ನಿಸಿದ ವೇಳೆ ಸಂಭವಿಸಿದ ದುರಂತ

ಮಂಡ್ಯ: ವೇಗವಾಗಿ ಚಲಿಸುತ್ತಿದ್ದ ರೈಲನ್ನು ಸಮೀಪದಿಂದ ನೋಡಲು ಯತ್ನಿಸಿದ ಕಾಲೇಜು ವಿದ್ಯಾರ್ಥಿನಿ ರೈಲಿಗೆ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಚಂದಗಿರಿಕೊಪ್ಪಲು ಗ್ರಾಮದ ಬಳಿ ಸಂಭವಿಸಿದೆ.
ಚಂದಗಿರಿಕೊಪ್ಪಲು ಗ್ರಾಮದ ಸುರೇಶ್ ಅವರ ಪುತ್ರಿ ಸಿ.ಎಸ್ ಲಿಖಿತಾ (19) ಮೃತ ವಿದ್ಯಾರ್ಥಿನಿಯಾಗಿದ್ದಾರೆ. ಇವರು ಕೆ. ಆರ್. ಪೇಟೆ ತಾಲೂಕು ಚಿನಕುರಳಿ ಗ್ರಾಮದ ಎಸ್ಟಿಜಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದರು. ಇವರನ್ನು ತಾಯಿ ಭವ್ಯಾ ಪ್ರತಿನಿತ್ಯ ಗ್ರಾಮದಿಂದ ಪಾಂಡವಪುರ ಪಟ್ಟಣಕ್ಕೆ ಬೆಳಗ್ಗೆ ಬಿಟ್ಟು, ಪುನಃ ವಾಪಸ್ಸು ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಕರೆತರುತ್ತಿದ್ದರು ಎನ್ನಲಾಗಿದೆ.
ಎಂದಿನಂತೆ ಶನಿವಾರವೂ ಭವ್ಯಾ ಪುತ್ರಿಯನ್ನು ಪಾಂಡವಪುರದಿಂದ ಸ್ವಗ್ರಾಮಕ್ಕೆ ಕರೆತರುತ್ತಿದ್ದ ವೇಳೆ ಗ್ರಾಮ ಸಮೀಪದಲ್ಲಿ ರೈಲು ಹಾದು ಹೋಗಲು ಗೇಟ್ ಹಾಕಲಾಗಿತ್ತು. ರೈಲನ್ನು ಹತ್ತಿರದಿಂದ ನೋಡುವ ಖುಷಿಯಿಂದ ದ್ವಿಚಕ್ರ ವಾಹನದಿಂದ ಕೆಳಗೆ ಇಳಿದ ವಿದ್ಯಾರ್ಥಿನಿ ಚಲಿಸುತ್ತಿದ್ದ ರೈಲಿನ ಹಳಿಯ ತೀರ ಸಮೀಪಕ್ಕೆ ಧಾವಿಸಿದ್ದಾರೆ. ಈ ವೇಳೆ ಮೈಸೂರಿನಿಂದ ಬೆಂಗಳೂರಿಗೆ ವೇಗವಾಗಿ ಚಲಿಸುತ್ತಿದ್ದ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಮುಂಭಾಗ ಯುವತಿ ತಲೆಗೆ ಬಡಿದು ಬಳಿಕ ರಭಸದ ಸೆಳತಕ್ಕೆ ಹಳಿಯೊಳಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ತನ್ನ ಕಣ್ಣೆದುರಿಗೇ ನಡೆದ ಈ ಘಟನೆಯಿಂದ ಆಘಾತಗೊಂಡ ವಿದ್ಯಾರ್ಥಿನಿ ತಾಯಿ ಭವ್ಯಾ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಮೃತಳ ಪೋಷಕರು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






