ಬಿಜೆಪಿ ಟಿಕೆಟ್ ಸಿಗುವ ಆತ್ಮವಿಶ್ವಾಸವಿದೆ: ಸಂಸದೆ ಸುಮಲತಾ ಪುನರುಚ್ಚಾರ

ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯದಿಂದಲೇ ಸ್ಪರ್ಧೆ ಮಾಡುತ್ತೇನೆ. ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬ ಆತ್ಮವಿಶ್ವಾಸ ಇದೆ ಎಂದು ಸಂಸದೆ ಸುಮಲತಾ ಅಂಬರೀಶ್ ಪುನರುಚ್ಚರಿಸಿದ್ದಾರೆ.
ನಗರದ ರೈಲು ನಿಲ್ದಾಣ ಆಧುನೀಕರಣ ಕಾಮಗಾರಿಗೆ ಪ್ರದಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದ ಸಮಾರಂಭದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಮಂಡ್ಯದಲ್ಲಿ ಬಿಜೆಪಿಯಿಂದ ನಾನು ಸ್ಪರ್ಧೆ ಮಾಡಿದರೆ ಪಕ್ಷ ಸಂಘಟನೆಗೂ ಅನುಕೂಲವಾಗಲಿದೆ ಎಂಬುದು ಸೇರಿದಂತೆ ಮಂಡ್ಯದ ಸ್ಥಿತಿಗತಿ ಬಗ್ಗೆ ವರಿಷ್ಠರಿಗೆ ತಿಳಿಸಿದ್ದೇನೆ. ಟಿಕೆಟ್ ಸಿಗುವ ಭರವಸೆ ಇದೆ ಎಂದು ಅವರು ಸ್ಪಷ್ಟಪಡಿಸಿದರು.
ಪಕ್ಷೇತರ ಸದಸ್ಯೆಯಾದರೂ ನಾನು ಕೇಂದ್ರದ ಮೋದಿ ಸರಕಾರವನ್ನು ಬೆಂಬಲಿಸಿಕೊಂಡು ಬಂದಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹಿರಂಗವಾಗಿ ಬಿಜೆಪಿಗೆ ಪ್ರಚಾರ ಮಾಡಿದ್ದೇನೆ. ಶೇ.33 ಮಹಿಳಾ ಮೀಸಲಾತಿಯನ್ನು ಬಿಜೆಪಿ ಸರಕಾರ ತಂದಿದ್ದು, ನನಗೆ ಟಿಕೆಟ್ ಸಿಗಲಿದೆ ಎಂದು ಅವರು ಹೇಳಿದರು.
ಎನ್‍ಡಿಎ ಭಾಗವಾಗಿ ಜೆಡಿಎಸ್‍ನವರು ಟಿಕೆಟ್ ಕೇಳಿದ್ದಾರೆ ನಿಜ. ನಾನೂ ಕೂಡ ಎನ್‍ಡಿಎ ಭಾಗವಾಗಿಯೇ ಟಿಕೆಟ್ ಕೇಳುತ್ತಿದ್ದೇನೆ. ಹಾಗಾಗಿ ನನಗೆ ಟಿಕೆಟ್ ದೊರೆತರೆ ಜೆಡಿಎಸ್‍ನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ನಾನು ಮಂಡ್ಯದಿಂದಲೇ, ಅದರಲ್ಲೂ ಬಿಜೆಪಿಯಿಂದಲೇ ಸ್ಪರ್ಧೆ ಮಾಡಬೇಕು. ಮಂಡ್ಯವನ್ನು ಬಿಡಬೇಡಿ, ನಿಮ್ಮ ಜತೆ ಇರುತ್ತೇವೆಂಬ ಭರವಸೆ ರವಿವಾರ ಬೆಂಗಳೂರಿನಲ್ಲಿ ನಡೆದ ಮಂಡ್ಯದ ನನ್ನ ಬೆಂಬಲಿಗರ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು.
ರೈಲಿನಲ್ಲಿ ಓಡಾಡುವುದು ಕಷ್ಟವಾಗುತ್ತಿತ್ತು. ಮೋದಿ ಸರಕಾರ ಬಂದ ಮೇಲೆ ರೈಲ್ವೆ ವ್ಯವಸ್ಥೆ ಬಹಳಷ್ಟು ಸುಧಾರಣೆ ಆಗಿದೆ. ಕೇಂದ್ರವು ಇತರ ರಾಜ್ಯಗಳಿಗೆ ನೀಡುವಂತೆಯೇ ಹಲವು ಯೋಜನೆಗಳು ಕರ್ನಾಟಕಕ್ಕೂ ದೊರಕಿವೆ ಇಡೀ ವಿಶ್ವವೇ ಭಾರತದ ಕಡೆ ನೋಡುವಂತೆ ಮೋದಿ ಮಾಡಿದ್ದಾರೆ ಎಂದು ಸುಮಲತಾ ಶ್ಲಾಘಿಸಿದರು.







