ಮಂಡ್ಯ ವಿವಿ ವಿಲೀನ ನಿರ್ಣಯ ಕೈಬಿಡಲು ಒತ್ತಾಯ

PC : mandyauniversity
ಮಂಡ್ಯ : ಮಂಡ್ಯ ವಿಶ್ವವಿದ್ಯಾಲಯವನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ವಿಲೀನಗೊಳಿಸುವ ನಿರ್ಣಯವನ್ನು ಕೈಬಿಡಬೇಕು ಎಂದು ಮೈಸೂರು ವಿವಿ ಶಿಕ್ಷಣ ಮಂಡಳಿಯ ಮಾಜಿ ಸದಸ್ಯ ಡಾ.ಯಮದೂರು ಸಿದ್ದರಾಜು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಗೆ ವಿಶ್ವವಿದ್ಯಾಲಯ ಲಭಿಸಿರುವುದು ಹೆಮ್ಮೆಯ ವಿಷಯವಾಗಿದ್ದು, ಅದನ್ನು ಉಳಿಸಿಕೊಂಡು ಕೊಂಡೊಯ್ಯವಲ್ಲಿ ಜಿಲ್ಲಾಮಂತ್ರಿಗಳು ಹಾಗೂ ಶಾಸಕರುಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ಮಂಡ್ಯ ವಿಶ್ವವಿದ್ಯಾಲಯವನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ವಿಲೀನ ಮಾಡಿದಲ್ಲಿ ಸದರಿ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಾಲಿ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅವರು ಹೇಳಿದರು.
ಮಂಡ್ಯ ವಿವಿ ಶಿಕ್ಷಣ ಮಂಡಳಿ ಸದಸ್ಯ ಶಿವಶಂಕರ್ ಕೆ., ಸಮಗ್ರ ಸಾವಯವ ಸುಸ್ತಿರ ಕೃಷಿ ಟ್ರಸ್ಟ್ ನ ಅಧ್ಯಕ್ಷ ಜೋಗಿಗೌಡ, ಸುಂದ್ರಪ್ಪ, ರಂಜಿತ್ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.